ಅಪ್ರಾಪ್ತೆಯನ್ನು ಮನೆಗೆ ಕರೆದೊಯ್ದು ದೈಹಿಕ ಸಂಪರ್ಕ ಬಂಧಿತ ಆರೋಪಿಗೆ ಜಾಮೀನು
ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆದೊಯ್ದು ದೈಹಿಕ ಸಂಪರ್ಕ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ವ್ಯಕ್ತಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಕೋಡಿಂಬಾಡಿಯ ಸುಧಾಕರ್ ಯಾನೆ ಸುಧೀರ್ ಎಂಬಾತ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಆರೋಪಿ.ದೂರದ ಸಂಬಂಧಿ ಉಮೇಶ್ ಎಂಬವರ ಮೆಹಂದಿ ಕಾರ್ಯಕ್ರಮದಲ್ಲಿ ಬಾಲಕಿಗೆ ಆರೋಪಿಯ ಪರಿಚಯವಾಗಿತ್ತು. ಈ ಸಂದರ್ಭ ಆಕೆ ಆತನಿಗೆ ತನ್ನ ತಾಯಿಯ ಮೊಬೈಲ್ ಫೋನ್ ನಂಬರನ್ನು ನೀಡಿದ್ದು, ತಾಯಿ ಕೆಲಸದಿಂದ ಬಂದ ನಂತರ ಬಾಲಕಿಯು ತಾಯಿಯ ಮೊಬೈಲ್‌ನಿಂದ ಆರೋಪಿ ಸುಧಾಕರ್ ಯಾನೆ ಸುಧೀರ್ ಜೊತೆ ಮಾತನಾಡುತ್ತಿದ್ದರು ಮಾತ್ರವಲ್ಲದೆ ಪುತ್ತೂರು ಪೇಟೆಯಲ್ಲಿ ನಾಲ್ಕೈದು ಬಾರಿ ಆರೋಪಿಯನ್ನು ಭೇಟಿಯಾಗಿದ್ದರು.

ಕಳೆದ ಮಾರ್ಚ್ ತಿಂಗಳಲ್ಲಿ ಒಂದು ದಿನ ಬಾಲಕಿಯು ಆರೋಪಿಯೊಂದಿಗೆ ಸುಳ್ಯ ಪೇಟೆಯಲ್ಲಿ ಸುತ್ತಾಡಿ ರಾತ್ರಿ 8 ಗಂಟೆಗೆ ಆರೋಪಿಯು ಆಕೆಯನ್ನು ಕೋಡಿಂಬಾಡಿಯಲ್ಲಿರುವ ತನ್ನ ಮನೆಗೆ ಕರೆದೊಯ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಮೇ 19ರಂದು ಬಾಲಕಿಯನ್ನು ಸುಬ್ರಹ್ಮಣ್ಯಕ್ಕೆ ಕರೆದೊಯ್ದು ಬಳಿಕ ಕೋಡಿಂಬಾಡಿಯ ತನ್ನ ಮನೆಗೆ ಕರೆದೊಯ್ದ ಆರೋಪಿಯು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾಗಿ ಸಂತ್ರಸ್ತೆ ವಿಚಾರವನ್ನು ತನ್ನ ತಾಯಿಗೆ ತಿಳಿಸಿದ್ದರು. ಆ ಬಳಿಕ, ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿ ಪರ ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ಹಾಗೂ ಪ್ರತಿಷ್ಠಿತ ವಕೀಲರಾದ ಮಹೇಶ್ ಕಜೆರವರು ವಾದಿಸಿದ್ದರು.




