ಕ್ರಿಕೆಟ್ ವಿಚಾರದಲ್ಲಿ ವಾಟ್ಸಪ್‌ನಲ್ಲಿ ಅವಾಚ್ಯ ಶಬ್ದ ಪ್ರಯೋಗ ಯುವಕನಿಗೆ ಹಲ್ಲೆ ಪ್ರಕರಣ-ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಸುಳ್ಯದ ಮರ್ಕಂಜದಲ್ಲಿ ಕ್ರಿಕೆಟ್ ವಿಚಾರವಾಗಿ ವಾಟ್ಸಪ್‌ನಲ್ಲಿ ಅವಾಚ್ಯ ಶಬ್ದ ಪ್ರಯೋಗವಾಗಿ ವಿಚಾರಿಸಲು ಮನೆಗೆ ಹೋಗಿ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೂ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮರ್ಕಂಜದ ಅಂಗಡಿಮಜಲು ಎಂಬಲ್ಲಿ ಘಟನೆ ನಡೆದಿತ್ತು. ಸ್ಥಳೀಯವಾಗಿ ಗಾರೆ ಕೆಲಸ ಮಾಡಿಕೊಂಡಿದ್ದ ನಯನಕುಮಾರ್ ರೈ ಎಂಬವರ ಮೇಲೆ ಪ್ರಶಾಂತ್ ಆರ್ನಡ್ಕ, ಪ್ರಮೋದ್ ಬೊಳ್ಳಾಜೆ, ಚೇತನ್ ಜೋಗಿಮೂಲೆ, ಪ್ರಜ್ಞೇಶ್ ದೇಶಕೋಡಿ ಎಂಬವರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ನಯನ ಕುಮಾರ್ ರೈಯವರ ಅಣ್ಣ ಸುಂದರರವರು ದೂರು ನೀಡಿದ್ದರು.`ತಾನು ಮತ್ತು ಮನೆಯವರು ಜೂನ್ 9ರಂದು ರಾತ್ರಿ 10 ಗಂಟೆ ಸುಮಾರಿಗೆ ಊಟ ಮಾಡಿ ಎದುರಿನ ಸಿಟೌಟ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಆರೋಪಿಗಳು ಮನೆಯ ಬಳಿಗೆ ಬಂದು ನಯನಕುಮಾರ್ ರೈ ಎಲ್ಲಿ ಎಂದು ಕೇಳಿದಾಗ, ಏನು ವಿಷಯ, ಇಷ್ಟು ಹೊತ್ತಿನಲ್ಲಿ ಯಾಕೆ ಬಂದಿರಿ ಎಂದು ನಾನು ಕೇಳಿದರೂ ಏನೂ ಉತ್ತರಿಸದೆ ನಯನಕುಮಾರ್ ರೈ ಎಲ್ಲಿ ಎಂದು ಕೇಳುತ್ತಿದ್ದರು.

ಅಷ್ಟರಲ್ಲಿ ತಮ್ಮ ನಯನ ಕುಮಾರ್ ರೈ ಒಳಗಿನಿಂದ ಹೊರಗೆ ಬಂದಾಗ ನಾಲ್ಕು ಜನ ಆರೋಪಿಗಳೂ ನಮ್ಮ ಮನೆಯ ಗೇಟಿನ ಬದಿಯಲ್ಲಿದ್ದ ಬೇಲಿಯಿಂದ ದೊಣ್ಣೆಗಳನ್ನು ಮುರಿದುಕೊಂಡು ಬಂದು ಏನೂ ಮಾತನಾಡದೆ ಏಕಾಏಕಿ ತಮ್ಮನ ಮುಖಕ್ಕೆ, ತಲೆಗೆ ಹೊಡೆದರು. ಈ ವೇಳೆ ತಮ್ಮ ಕೆಳಗೆ ಬಿದ್ದಿದ್ದು ಆರೋಪಿಗಳು ಆತನ ಎದೆ, ಹೊಟ್ಟೆಯನ್ನು ಕಾಲಿನಿಂದ ತುಳಿದು, ಈದಿನ ಈತನನ್ನು ಕೊಂದು ಬಿಡೋಣ ಎನ್ನುತ್ತಾ ಮನಬಂದಂತೆ ಕಾಲಿನಿಂದ ತುಳಿದರು. ತಮ್ಮನ ಮೇಲೆ ಆರೋಪಿಗಳು ಮಾರಕಾಯುಧ ದೊಣ್ಣೆಯಿಂದ ಹಲ್ಲೆ ಮಾಡಿದ್ದರಿಂದ ತಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದ. ತಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ನಯನ ಕುಮಾರ್ ರೈ ಅವರ ಅಣ್ಣ ಸುಂದರ ಅವರು ನೀಡಿದ್ದ ದೂರಿನ ಮೇರೆಗೆ ಸುಳ್ಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ಪುತ್ತೂರಿನ ಕಜೆ ಲಾ ಚೇಂಬರ್ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಮತ್ತು ಮಹೇಶ್ ಜೋಗಿ ಮಂಗಳೂರು ವಾದಿಸಿದ್ದರು.




