ವಿದೇಶದಲ್ಲಿ ಉದ್ಯೋಗದ ವೀಸಾ ಕೊಡುವುದಾಗಿ ನಂಬಿಸಿ ನಾಲ್ಕೂವರೆ ಕೋಟಿ ವಂಚನೆ – ಇಬ್ಬರು ಪೊಲೀಸ್ ಬಲೆಗೆ
ಜಾಹೀರಾತು ನೀಡಿ ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ಸುಮಾರು ನಾಲ್ಕುವರೆ ಕೋಟಿ ರೂಪಾಯಿ ವಂಚಿಸಿದ ಇಬ್ಬರು ಆರೋಪಿತರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರದ ನವಿ ಮುಂಬೈ ನಿವಾಸಿ 45 ವರ್ಷ ಪ್ರಾಯದ ದಿಲ್ ಶಾದ್ ಅಬ್ದುಲ್ ಸತ್ತರ್ ಖಾನ್ ಹಾಗೂ ದೊಂಬಿವಿಲಿ ನಿವಾಸಿ 34 ವರ್ಷ ಪ್ರಾಯದ ಸಾಹುಕಾರಿ ಕಿಶೋರ್ ಕುಮಾರ್ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುತ್ತಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಮಸೀವುಲ್ಲಾ ಖಾನ್ ಎಂಬ ಮುಂಬೈ ಮೂಲದ ಆರೋಪಿಯನ್ನು ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ಮಂಗಳೂರಿನ ಬೆಂದೂರ್ ವೆಲ್ ಬಳಿ ಹೈಯರ್ ಗ್ಲೋ ಎಲಿಗೆಂಟ್ ಓವರ್ ಸೀಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಎಂಬ ಶಾಖೆಯನ್ನು ತೆರೆದು, ಪತ್ರಿಕೆಯಲ್ಲಿ ಜಾಹೀರಾತು ನೀಡಿ, ವಿದೇಶದಲ್ಲಿ ಉದ್ಯೋಗದ ವೀಸಾ ಕೊಡುವುದಾಗಿ ನಂಬಿಸಿ; ಸುಮಾರು 289 ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದುಕೊಂಡು ಅವರಿಗೆ ಉದ್ಯೋಗದ ವೀಸಾ ನೀಡದೆ, 4 ಕೋಟಿ 50 ಲಕ್ಷ ರೂಪಾಯಿ ವಂಚನೆ ಮಾಡಿದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ಮೊ. ನಂ- 75/2025 : 316(2),318(4),r/w 3(5)) BNS ರಂತೆ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.




