ಬಜ್ಪೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಮಹಾಸಭೆ
ಹೆತ್ತವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಬೇಕು – ಐರಿನ್ ರೆಬೆಲ್ಲೊ

ಬಜ್ಪೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಐರಿನ್ ರೆಬೆಲ್ಲೊರವರು ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ “ಮಕ್ಕಳು ಇಚ್ಛಾಶಕ್ತಿ, ಭದ್ಧತೆ, ಛಲವನ್ನು ಬೆಳೆಸಿಕೊಳ್ಳಬೇಕು. ಹೆತ್ತವರು ಮಗುವಿನಲ್ಲಿ ಹುದುಗಿರುವ ಪ್ರತಿಭೆ ಸಾಮರ್ಥ್ಯಗಳನ್ನು ಬೆಳೆಸಬೇಕೆ ಹೊರತು ಅವರ ಮೇಲೆ ಒತ್ತಡ ಹೇರಬಾರದು. ಸಕರಾತ್ಮಕ ಮಾತುಗಳನ್ನು ಆಡುವಂತೆ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಿ ಹೃದಯವಂತರನ್ನಾಗಿಸಬೇಕೆಂದು” ಪೋಷಕರಿಗೆ ಮನವರಿಕೆ ಮೂಡಿಸಿದರು.


ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಶಾಲಾ ಸಂಚಾಲಕರಾಗಿರುವ ವಂದನೀಯ ಭಗಿನಿ ಫ್ಲಾವ್ಯ ವಿಲ್ಮರವರು ಬದುಕಿನ ತತ್ವ ನಿಷ್ಠೆಗಳನ್ನು ಮೈಗೂಡಿಸಿಕೊಂಡು ಗೆಲುವಿನ ಹಾದಿಯಲ್ಲಿ ಸಾಗುವ ಛಲ ವಿದ್ಯಾರ್ಥಿಗಳಿಗಿದ್ದರೆ ಯಶಸ್ಸನ್ನು ಸಾಧಿಸಬಹುದು ಎಂದು ತಮ್ಮ ಅಧ್ಯಕ್ಷೀಯ ನುಡಿಗಳಿಂದ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕರಾಗಿರುವ ವಂದನೀಯ ಭಗಿನಿ ವೀಣಾ ಡಿಸೋಜರವರು ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಹೂವನ್ನು ನೀಡುವುದರ ಮೂಲಕ ಅಭಿನಂದಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕಿ ಭಗಿನಿ ಫ್ಲಾವ್ಯ ವಿಲ್ಮಾರವರು ಸ್ಥಳೀಯ ಕಾನ್ವೆಂಟಿನ ಮೇಲ್ವಿಚಾರಕಿ ವಂದನೀಯ ಭಗಿನಿ ಲಿಲ್ಲಿ ಡಿಸೋಜ ಹಾಗೂ ಶಾಲಾ ಮುಖ್ಯ ಶಿಕ್ಷಕರು, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಹಾಗೂ ನೂತನವಾಗಿ ಆಯ್ಕೆಯಾಗಿರುವ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿರುವ ವಿದ್ಯಾ ಶೆಟ್ಟಿಯವರು ಉಪಸ್ಥಿತಿಯಲ್ಲಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲರನ್ನು ಚೈತ್ರಾ ಸ್ವಾಗತಿಸಿದರು. ರೋಹಿಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಶಿಕ್ಷಕರು ವರದಿ ವಾಚಿಸಿ, ಸವಿತಾ ವಂದಿಸಿದರು.




