ಕೃಷಿ ಮತ್ತು ಕೃಷಿಕರ ಜೀವನವನ್ನು ಕಾಡು ಪ್ರಾಣಿಗಳಿಂದ ರಕ್ಷಣೆ ನೀಡಿ ರೈತರ ಬದುಕನ್ನು ಹಸನಾಗಿಸಿ – ಬಿಟ್ಟಿ ನೆಡುನಿಲಂ
ಅರಣ್ಯದಂಚಿನಲ್ಲಿರುವ ರೈತರ ಕಷ್ಟ ಕಾರ್ಪಣ್ಯಗಳಿಗೆ ಸರಕಾರ ಕೂಡಲೇ ಸ್ಪಂದಿಸಿ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಅಧ್ಯಕ್ಷ ಬಿಟ್ಟಿ ನೆಡುನಿಲಂ ಆಗ್ರಹಿಸಿದರು.


ಅವರು ಜುಲಾಯ್ 21ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಡಿ.ಕೆ.ಆರ್.ಡಿ.ಎಸ್. ಸ್ನೇಹಕಿರಣ ಮಹಿಳಾ ಜಿಲ್ಲಾ ಒಕ್ಕೂಟದ ವತಿಯಿಂದ ನಡೆದ ಜನಾಂದೋಲನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ವಿಚಾರ ತಿಳಿಸಿದರು. ಅವರು ಮಾತನಾಡುತ್ತಾ ಕೃಷಿ ಭೂಮಿಯಲ್ಲಿ ಆನೆಗಳಿಗೆ ಕಂದಕಗಳನ್ನು ನಿರ್ಮಿಸಿದರೂ ಪ್ರಯೋಜನವಾಗುತ್ತಿಲ್ಲ ಅರಣ್ಯ ಪ್ರದೇಶಗಳ ಸುತ್ತ ಸೋಲಾರ್ ಫೆನ್ಸಿಂಗ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.


ಮುಖ್ಯ ಭಾಷಣಕಾರರಾಗಿ ಲಕ್ಷ್ಮೀಶ್ ಗಬ್ಲಡ್ಕ ಮಾತನಾಡುತ್ತಾ ಕೃಷಿ ಎಂಬುವುದು ಸಮಾಜದ ಆರ್ಥಿಕ ಚಕ್ರ ತಿರುಗಲು ಬಹುಮುಖ್ಯ ಶಕ್ತಿಯಾಗಿದೆ, ಆದರೆ ಕೃಷಿಕರ ರಕ್ಷಣೆಯಲ್ಲಿ ನಾವು ಸರಿಯಾದ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದೇವೆ, ಸಾಕು ಪ್ರಾಣಿಗಳ ಮೇಲೆ ಇರುವ ಪ್ರೀತಿ ಕೃಷಿಕರ ಮೇಲೆ ಇಲ್ಲದಾಗಿದೆ. ಕೃಷಿಕರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡುತ್ತಿದ್ದಾರೆ ಎಂಬ ಹೇಳಿಕೆ ಸಮಂಜಸವಲ್ಲ, ಜನಸ್ನೇಹಿ ಕಾನೂನಾತ್ಮಕ ರೂಪುರೇಶೆಗಳನ್ನು ರಚಿಸಬೇಕು ಎಂದು ಅವರು ತಿಳಿಸಿದರು.

ಕೆ.ಎಸ್.ಎಂ.ಸಿ.ಎ. ಇದರ ನಿರ್ದೇಶಕರಾದ ಆದರ್ಶ್ ಜೋಸೆಫ್ ಮಾಡುನಾಡುತ್ತಾ, ಕೃಷಿಕರ ಭೂ ಪರಿವರ್ತನೆ ಆಗುತ್ತಿಲ್ಲ, ಗಾಯದ ಮೇಲೆ ಬರೆ ಎಳೆದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಜನರ ಜೀವ ಹೋದ ಮೇಲೆ ಪರಿಹಾರ ಕೊಟ್ಟರೆ ಪ್ರಯೋಜನವಿಲ್ಲ, ಆದ್ದರಿಂದ ಅರಣ್ಯ ಇಲಾಖೆ ಮತ್ತು ಸರ್ಕಾರ ಮತ್ತು ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ಫಲ ನೀಡುವ ಗಿಡಗಳನ್ನು ಅರಣ್ಯ ಪ್ರದೇಶದ ಸುತ್ತ ಮುತ್ತ ನೆಡುವ ಮೂಲಕ ಕಾಡು ಪ್ರಾಣಿಗಳಿಗೆ ಆಹಾರವನ್ನು ಒದಗಿಸಬೇಕು, ಆನೆ ಕಂದಕಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಬೇಕು. ಸಮತೋಲನ ಕಾಪಾಡಲು ಕಾಡುಪ್ರಾಣಿಗಳು ಬದುಕಬೇಕು ಮತ್ತು ಕೃಷಿಕರೂ ಕೂಡ ಬದುಕಬೇಕು ಹಾಗೂ ಪ್ರಕೃತಿಯು ಕೂಡ ಉಳಿಯಬೇಕು, ಆದಷ್ಟು ಬೇಗ ಕೃಷಿಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನೆ ನೀಡಬೇಕು ಎಂದು ಆಗ್ರಹಿಸಿದರು. ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಮಾತನಾಡಿ ತಾಲೂಕಿನಲ್ಲಿ 30,000 ಎಕ್ರೆ ನೋಡಿಕೊಳ್ಳಲು ಕೇವಲ 35 ಸಿಬ್ಬಂದಿಗಳು ಇದ್ದಾರೆ. ಸಿಬ್ಬಂದಿಗಳ ಕೊರತೆಯಿಂದಾಗಿ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ, ನೇತಾಡುವ ಸೋಲಾರ್ ಫೆನ್ಸ್ ಗಳಿಗೆ ಈಗಾಗಲೇ ಸರಕಾರಕ್ಕೆ ಮನವಿ ಮಾಡಿದ್ದೇವೆ, ಅನುದಾನ ಬಂದ ಕೂಡಲೇ ಶೀಘ್ರ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಕೆ.ಎಸ್.ಎಂ.ಸಿ.ಎ. ವತಿಯಿಂದ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜನಾಂದೋಲನದಲ್ಲಿ ಜೈಸನ್ ಪಟ್ಟೇರಿಲ್, ಸೆಬಾಸ್ಟಿಯನ್ ಮಲೇಟಿಲ್, ನ್ಯಾಯವಾದಿ ಸೇವಿಯರ್ ಪಾಲೇಲಿ ಥೋಮಸ್ ಜೋಸೆಫ್, ಸೆಬಾಸ್ಟಿನ್ ಪಿ.ಸಿ. ಮತ್ತು ನೂರಾರು ಸಂತ್ರಸ್ತರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.




