KSRTC ಮಾಜಿ MD ಸಹಿಯನ್ನೇ ನಕಲು ಮಾಡಿ ಲಕ್ಷ ಲಕ್ಷ ವಂಚನೆ ಎಸಗಿದ ಖದೀಮ ರಿಚ್ಚರ್ಡ್
ಖದೀಮನೊಬ್ಬ ನಿಕಟಪೂರ್ವ KSRTC MD ಅನ್ಬುಕುಮಾರ್ ರವರ ಸಹಿಯನ್ನೇ ನಕಲು ಮಾಡಿ ಲಕ್ಷ ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. KSRTC MDಯವರ ಸಹಿಯನ್ನೇ ನಕಲು ಮಾಡಿದ ಭೂಪ KSRTC ಸಿಬ್ಬಂದಿಯೋರ್ವನಿಗೆ ಸಹಿ ತೋರಿಸಿ ಯಾಮಾರಿಸಿದ್ದಾನೆ. ಸಂತ್ರಸ್ತ ಸಿಬ್ಬಂದಿಯಿಂದ ಸುಮಾರು 1.35 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಲೂಟಿ ಮಾಡಿದ್ದಾನೆ.

ಲೆಕ್ಕಪತ್ರ ಶಾಖೆಯಲ್ಲಿ ಕೆಲಸ ಮಾಡ್ತಿರೋ ರಿಚರ್ಡ್ ಎಂಬಾತ ಈ ಕೃತ್ಯ ಎಸಗಿದ್ದು, ಇದೇ ರೀತಿ ಹಲವು ಸಿಬ್ಬಂದಿಗಳಿಗೂ ಈತ ಎಂಡಿ ಸಹಿ ನಕಲು ಮಾಡಿ ವಂಚಿಸಿರುವ ಆರೋಪ ಕೇಳಿಬಂದಿದೆ. ಸಾಗರ ಡಿಪೋದ ನಾಗರಾಜ್ ಕುಗ್ವೆ ಎಂಬ ಸಿಬ್ಬಂದಿ ವಂಚನೆಗೆ ಒಳಗಾದ ವ್ಯಕ್ತಿ. ಅಮಾನತು ಆದೇಶ ರದ್ದು ಮಾಡಿ ಪುನರ್ ನೇಮಕಾತಿ ಮಾಡಿಸಿಕೊಡುವುದಾಗಿ ರಿಚ್ಚರ್ಡ್ ವಂಚನೆ ಎಸಗಿದ್ದು, KSRTC MD ಅನ್ಬುಕುಮಾರ್ ಸಹಿಯಾಗಿದೆ. ಹಣ ಕಳುಹಿಸಿಕೊಟ್ರೆ ಆದೇಶ ಪತ್ರ ರವಾನೆ ಮಾಡುತ್ತೇನೆ ಎಂದು ಹೇಳಿ ಯಾಮಾರಿಸಿದ್ದಾನೆ.

ರಿಚ್ಚರ್ಡ್ ಕೆಳಗಿನವರಿಂದ ಮೇಲಿನವರ ಕೈ ಬಿಸಿ ಮಾಡ್ಬೇಕೆಂದು ಹಣಕ್ಕೆ ಬೇಡಿಕೆ ಇಟ್ಟಿದ್ದ. ಕೆಲಸ ಆಯ್ತಲ್ಲಾ ಎಂಬ ಸಮಾಧಾನದಲ್ಲಿ ಗೂಗಲ್ ಪೇನಲ್ಲಿ ನಾಗರಾಜ್ ಕುಗ್ವೆ ಹಣ ರವಾನಿಸಿದ್ದ. ಆ ಬಳಿಕ ಅಂಚೆಯಲ್ಲಿ ಬರಬೇಕಾದ ನೇಮಕಾತಿ ಪತ್ರ ವಾಟ್ಸಪ್ನಲ್ಲಿ ರಿಚ್ಚರ್ಡ್ ಕಳುಹಿಸಿದ್ದ. ಈ ವೇಳೆ ನಾಗರಾಜ್ ಕುಗ್ವೆ ಅನುಮಾನದಿಂದ ಸಾರಿಗೆ ಸ್ನೇಹಿತರಿಗೆ ತೋರಿಸಿದಾಗ ವಂಚನೆ ಮಾಡಿರುವುದು ಬಯಲಾಗಿದೆ. ನಂತರ ಪೋಸ್ಟ್ ಬಿಟ್ಟು ವಾಟ್ಸಪ್ನಲ್ಲಿ ಆದೇಶ ಪತ್ರ ಬರಲು ಹೇಗೆ ಸಾಧ್ಯ ಎಂದು ರಿಚ್ಚರ್ಡ್ನನ್ನು ಪ್ರಶ್ನೆ ಮಾಡಲಾಗಾಗಿತ್ತು. ಆ ಬಳಿಕ ಕೇಂದ್ರ ಕಚೇರಿಯಲ್ಲಿ ಪರಿಶೀಲಿಸಿದಾಗ ರಿಚ್ಚರ್ಡ್ ಅಕ್ರಮ ಬಯಲಾಗಿದೆ. MD ಸಹಿಯನ್ನೇ ನಕಲು ಮಾಡಿ ಹಣ ಪೀಕಿರುವುದು ದೃಢವಾಗಿದೆ.

ಖದೀಮ ರಿಚ್ಚರ್ಡ್ ಕರ್ಮಕಾಂಡ ಕಂಡು ಹಾಲಿ KSRTC MD ಅಕ್ರಂ ಪಾಷಾ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಅವರು, ಸೆಕ್ಯೂರಿಟಿ ಮುಖ್ಯಸ್ಥರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಸೆಕ್ಯೂರಿಟಿ ಮುಖ್ಯಸ್ಥರು ತನಿಖೆ ಆರಂಭಿಸಿದ್ದು, ಸಂತ್ರಸ್ತ ನಾಗರಾಜ್ ಕುಗ್ವೆ ಸೆಕ್ಯೂರಿಟಿ ಮುಖ್ಯಸ್ಥರ ಬಳಿ ಘಟನೆಯ ಹೇಳಿಕೆ ವಿವರಣೆ ನೀಡಿದ್ದಾರೆ. ಇನ್ನೂ ಅಕ್ರಮ ಪತ್ತೆಯಾಗುತ್ತಿದ್ದಂತೆ ವಂಚಕ ರಿಚ್ಚರ್ಡ್ ಎಸ್ಕೇಪ್ ಆಗಿದ್ದು ವಂಚಕನ ಪತ್ತೆ ಮಾಡಿ ಕೂಡಲೇ ಕ್ರಮ ಕೈಗೊಳ್ಳುವಂತೆ KSRTC MD ಅಕ್ರಂ ಪಾಷಾ ಅವರು ಸೂಚಿಸಿದ್ದಾರೆ.




