ಮೊಗರ್ನಾಡ್ ದೇವ ಮಾತಾ ಚರ್ಚ್ ನಲ್ಲಿ ವಿವಾಹಿತ ದಂಪತಿಗಳ ಸಮಾವೇಶ
ಚರ್ಚ್ ಸ್ಥಾಪನಾ 250 ವರ್ಷಗಳ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮ















ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಮೊಗರ್ನಾಡ್ ದೇವಮಾತಾ ಚರ್ಚ್ ನ 250 ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಜುಲಾಯಿ 27ರಂದು ಆದಿತ್ಯವಾರ ವಿವಾಹಿತ ದಂಪತಿಗಳ ಸಮಾವೇಶವನ್ನು ದಿವ್ಯ ಬಲಿ ಪೂಜೆಯೊಂದಿಗೆ ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು. ಬಲಿಪೂಜೆಯ ಸಂದರ್ಭದಲ್ಲಿ ನೆರೆದ ಎಲ್ಲಾ ವಿವಾಹಿತ ದಂಪತಿಗಳಿಗೆ ವಿಶೇಷ ರೀತಿಯ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.


















ಪವಿತ್ರ ಬಲಿ ಪೂಜೆಯನ್ನು ಮಂಗಳೂರು ಧರ್ಮಕ್ಷೇತ್ರದ ಬಜ್ಜೋಡಿಯಲ್ಲಿರುವ ಕೌಟುಂಬಿಕ ಜೀವನ ಕೆಂದ್ರದ ನಿರ್ದೇಶಕರಾದ ವಂದನೀಯ ಫಾದರ್ ಆಲ್ವಿನ್ ರಿಚ್ಚರ್ಡ್ ಡಿಸೋಜ, ಮೊಗರ್ನಾಡು ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವಮಾತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ ಮತ್ತು ವಂದನೀಯ ಫಾದರ್ ಆಸ್ಟಿನ್ ಫೆರ್ನಾಂಡಿಸ್ ರವರು ನೆರವೇರಿಸಿದರು.









ಬಲಿ ಪೂಜೆಯ ಬಳಿಕ ದೇವಮಾತಾ ಸಭಾಭವನದಲ್ಲಿ ಬೆಳಗಿನ ಉಪಹಾರವನ್ನು ಸ್ವೀಕರಿಸಿದ ನಂತರ ಜುಬಿಲಿ ಸಮಾವೇಶದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮೊಗರ್ನಾಡ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ನೆರೆದ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಕುಟುಂಬ ಜೀವನದಲ್ಲಿ ಪತಿ ಹಾಗೂ ಪತ್ನಿ ನಡುವೆ ಹೊಂದಾಣಿಕೆ ಇರಬೇಕು. ಕುಟುಂಬದಲ್ಲಿ ಪ್ರಾರ್ಥನೆ ಅತೀ ಅಗತ್ಯ. ವೈವಾಹಿಕ ಜೀವನದಲ್ಲಿ ಇರುವಂತಹ ಎಲ್ಲಾ ಮಾರ್ಗಗಳನ್ನು ಉತ್ತಮವಾಗಿ ಎದುರಿಸಿ ಮುಂದೆ ಸರಿಯಬೇಕು. ಹಿರಿಯರ ಆದರ್ಶವನ್ನು ಪಾಲಿಸಿಕೊಂಡು ವೈವಾಹಿಕ ಜೀವನವನ್ನು ಮುನ್ನಡೆಸಬೇಕು. ಪತಿ-ಪತ್ನಿಯರು ಒಬ್ಬರಿಗೊಬ್ಬರು ಹೊಂದಾಣಿಕೆಯನ್ನು ಇಟ್ಟುಕೊಂಡು ಮುನ್ನಡೆಯಬೇಕು. ಪತಿಯಾದವನು ತನ್ನ ಪತ್ನಿಗೆ, ಪತ್ನಿಯಾದವಳು ತನ್ನ ಪತಿಗೆ ಗೌರವವನ್ನು ನೀಡಬೇಕು ಎಂದು ವಂದನೀಯ ಫಾದರ್ ಆಲ್ವಿನ್ ರಿಚಾರ್ಡ್ ಡಿಸೋಜರವರು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ವಂದನೀಯ ಫಾದರ್ ಆಲ್ವಿನ್ ರಿಚರ್ಡ್ ಡಿಸೋಜರವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.









50 ವರ್ಷದ ವೈವಾಹಿಕ ಜೀವನವನ್ನು ಪೂರ್ಣಗೊಳಿಸಿದ ಮೊಗರ್ನಾಡ್ ಧರ್ಮಕೇಂದ್ರದ 11 ಮಂದಿ ದಂಪತಿಗಳಿಗೆ ಸನ್ಮಾನವನ್ನು ಮಾಡಲಾಯಿತು. ಮೊಗರ್ನಾಡ್ ದೇವ ಮಾತಾ ಚರ್ಚ್ ನ ಐದು ವಲಯಗಳಾದ ಗ್ಲೋರಿಯಾ, ಜೆರುಜಲೆಮ್, ರಿಜೋಯ್ಸ್, ಬೆತ್ಲೆಹೆಮ್ ಹಾಗೂ ಹೊಸಾನ್ನಾ ವಲಯದ 300 ವಿವಾಹಿತ ದಂಪತಿಗಳ ಉಪಸ್ಥಿತಿಯನ್ನು ಗೌರವಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ವಿವಾಹಿತ ದಂಪತಿಗಳಿಗೆ ಒಂದೆರಡು ಸ್ಪಾಟ್ ಗೇಮ್ಸ್‌ಗಳನ್ನು ನಡೆಸಲಾಯಿತು. ನೊಯೆಲ್ ಲೋಬೊ ಮತ್ತು ರೆನ್ನಿ ಫೆರ್ನಾಂಡಿಸ್ ತಮ್ಮ ವೈವಾಹಿಕ ಜೀವನದ ಕುರಿತು ಅನುಭವಗಳನ್ನು ಹಂಚಿಕೊಂಡರು.


ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಸರ್ವ ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ಜುಬಿಲಿ ಸಮಿತಿಯ ಸಂಯೋಜಕ ನವೀನ್ ಡಿಕುನ್ಹಾ ಹಾಗೂ ಎಲ್ಲಾ ಸಮಿತಿಗಳ ಸಂಚಾಲಕರು ಉಪಸ್ಥಿತರಿದ್ದರು. ಅಸುಂತಾ ಸುನಿತಾ ಡಯಾಸ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಶಾಂತ್ ಲೂವಿಸ್ ರವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.




