ಛತ್ತೀಸ್‌ಗಢದಲ್ಲಿ ಇಬ್ಬರು ಕ್ಯಾಥೊಲಿಕ್ ಸನ್ಯಾಸಿನಿಯರ ಮೇಲೆ ನಡೆದ ಅಕ್ರಮ ದಾಳಿ ಮತ್ತು ಬಂಧನ
ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫೊರ್ ಹ್ಯೂಮನ್ ರೈಟ್ಸ್ ವೆಸ್ಟರ್ನ್ ಝೋನ್ ಮಂಗಳೂರು ವತಿಯಿಂದ ತೀವ್ರ ಖಂಡನೆ

ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫೊರ್ ಹ್ಯೂಮನ್ ರೈಟ್ಸ್ (AKUCFHR) ವತಿಯಿಂದ ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಕಥೊಲಿಕ್ ಧಾರ್ಮಿಕ ಸನ್ಯಾಸಿನಿಯರ ವಿರುದ್ಧದ ಅಕ್ರಮ ದಾಳಿ ಮತ್ತು ಬಂಧನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಕೋಮುವಾದಿಗಳಿಂದ ಪ್ರಚೋದಿತವಾಗಿ ಈ ಘಟನೆ ನಡೆದಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಇದು ಧಾರ್ಮಿಕ ಸ್ವಾತಂತ್ರ, ವ್ಯಕ್ತಿ – ಗೌರವ ಹಾಗೂ ವಿಶೇಷವಾಗಿ ಮಹಿಳೆಯರ ಗೌರವವನ್ನು ತೀವ್ರವಾಗಿ ಹಾನಿಗೊಳಿಸುವ ಗಂಭೀರ ಘಟನೆಯಾಗಿದೆ.

ಈ ಅಕ್ರಮ ಘಟನೆ ಜುಲಾಯಿ 25ರಂದು ಛತ್ತೀಸ್‌ಗಢದ ದುರ್ಗ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಇಬ್ಬರು ಸನ್ಯಾಸಿನಿಯರು ಹಾಗೂ ಮೂರನೇ ವ್ಯಕ್ತಿಯೊಬ್ಬರು ಮೂವರು ಯುವತಿಯರೊಂದಿಗೆ ಪ್ರಯಾಣಿಸುತ್ತಿದ್ದು, ಆ ಯುವತಿಯರೆಲ್ಲರೂ 18 ವರ್ಷದ ಮೇಲಿನವರು ಮಾತ್ರವಲ್ಲದೆ, ಅವರ ಪೋಷಕರ ಸಂಪೂರ್ಣ ಜ್ಞಾನ ಮತ್ತು ಲಿಖಿತ ಅನುಮತಿಯೊಂದಿಗೆ ಪ್ರಯಾಣಿಸುತ್ತಿದ್ದರು. ಆದರೂ, ಅವರನ್ನು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ಅದಕ್ಕಿಂತ ಬೇಸರಕರ ಸಂಗತಿಯೆಂದರೆ, ಯುವತಿಯರ ಪೋಷಕರು ನಿಲ್ದಾಣಕ್ಕೆ ಬಂದ ಬಳಿಕವೂ, ಪೊಲೀಸರೇ ಅವರನ್ನು ತಮ್ಮ ಮಗಳ ಬಳಿ ಹೋಗಲು ನಿರ್ಬಂಧಿಸಿದರು. ಇನ್ನೂ ಆತಂಕಕಾರಿ ವಿಷಯವೆಂದರೆ, ಮೂಲ ಎಫ್‌ಐಆರ್‌ನಲ್ಲಿ ಲಭ್ಯವಿರದ ಧರ್ಮಾಂತರ ನಿಷೇಧ ಕಾಯ್ದೆ (ಛತ್ತೀಸ್‌ಗಢ ಧಾರ್ಮಿಕ ಸ್ವಾತಂತ್ರ್ಯ ಅಧಿನಿಯಮ, 1968) ರಚನೆಯ 4ನೇ ವಿಭಾಗವನ್ನು ನಂತರ ಅಕ್ರಮವಾಗಿ ಸೇರಿಸುವ ಮೂಲಕ ಕಾನೂನು ಪ್ರಕ್ರಿಯೆಯ ದುರುಪಯೋಗ ಮತ್ತು ಜಾಣ್ಮೆಯುತ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಶಂಕೆ ತೀವ್ರವಾಗುತ್ತದೆ. ಕೋಮುವಾದಿ ಗುಂಪುಗಳ ಬೆದರಿಕೆಗೆ ಗುರಿಯಾಗಿರುವ ಅಥವಾ ಅವರೊಂದಿಗೆ ಷಡ್ಯಂತ್ರದಲ್ಲಿ ಪಾಲುದಾರರಾದಂತೆ ಕಾಣುವ ಪೊಲೀಸರು, ಮುಗ್ದ ನಾಗರಿಕರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಭಾರತದಲ್ಲಿ ಕ್ರೈಸ್ತರ ಮೇಲಿನ ಹಲ್ಲೆಗಳು ಹೆಚ್ಚುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಘಟನೆ ಧಾರ್ಮಿಕ ಅಸಹಿಷ್ಣುತೆ ಮತ್ತು ಕಾನೂನಿನ ಅಸಮರ್ಪಕ ನಿರ್ವಹಣೆಯ ಆತಂಕಕಾರಿ ಉದಾಹರಣೆ.

ಈ ರೀತಿಯ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು. ಪ್ರಾರ್ಥನೆ, ಶಿಕ್ಷಣ ಮತ್ತು ಜನಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿದ ಮಹಿಳಾ ಧಾರ್ಮಿಕ ಸನ್ಯಾಸಿನಿಯರ ಮೇಲೆ ಆಥಾವಾ ಯಾರ ಮೇಲೂ ಸಹ ನಡೆಯುವ ಈ ರೀತಿಯ ಗಂಭೀರ ನಡೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಖಂಡನೀಯ ಹಾಗೂ ಅಸಹನೀಯ. ಈ ರೀತಿ ಕೆಲವು ಗುಂಪುಗಳ ಒತ್ತಡಕ್ಕೆ ಮಣಿದು ಕಾನೂನನ್ನು ದುರುಪಯೋಗ ಪಡಿಸುವುದು ಭಾರತ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯಕ್ಕೆ (ಅನುಚ್ಛೇದ 25) ತೀರ ದಕ್ಕೆ ತರುತ್ತದೆ. ಈ ಘಟನೆ ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲದೆ, ಭಾರತ ದೇಶದಲ್ಲಿ ಪಾಲಿಸಿ ಬಂದಿರುವ ಶಾಂತಿ, ಏಕತೆ ಮತ್ತು ಪರಸ್ಪರ ಗೌರವ ಎಂಬ ಶ್ರೇಷ್ಟ ಮೌಲ್ಯಗಳ ಧಿಕ್ಕಾರವಾಗಿದೆ.

ಆದ್ದರಿಂದ, ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫೊರ್ ಹ್ಯೂಮನ್ ರೈಟ್ಸ್, ಈ ಕೆಳಕಂಡ ತಕ್ಷಣದ ಕ್ರಮಗಳನ್ನು ಆಗ್ರಹಿಸುತ್ತಿದೆ:
- ಬಂಧಿತ ಸನ್ಯಾಸಿನಿಯರ ತಕ್ಷಣದ ಮತ್ತು ನಿರ್ವ್ಯಾಜ್ಯ ಬಿಡುಗಡೆ, ಜೊತೆಗೆ ಅವರ ನಿರ್ದೋಷಿತ್ವದ ಸಾರ್ವಜನಿಕ ಘೋಷಣೆ.
- ಪೊಲೀಸರ ಹಾಗೂ ಗುಂಪು ಹಲ್ಲೆಗೆ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳ ಮೇಲಿನ ನ್ಯಾಯಾಂಗ ತನಿಖೆ.
- ಭಯ ಮತ್ತು ದ್ವೇಷದ ವಾತಾವರಣವನ್ನು ಹರಡಲು ಧರ್ಮಾಂತರ ವಿರೋಧಿ ಕಾನೂನುಗಳನ್ನು ದುರುಪಯೋಗ ಪಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ.
- ಛತ್ತೀಸ್‌ಗಢ ಸರ್ಕಾರದಿಂದ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ, ಗೌರವ ಮತ್ತು ಹಕ್ಕುಗಳ ರಕ್ಷಣೆಗೆ ದೃಢ ಭರವಸೆ.

ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫೊರ್ ಹ್ಯೂಮನ್ ರೈಟ್ಸ್, ಅನ್ಯಾಯಕ್ಕೆ ಬಲಿಯಾದವರ ಜೊತೆ ಸಾಂತ್ವನವಾಗಿ ನಿಂತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಖಂಡಿಸಲು ಸದಾ ಸಿದ್ಧವಾಗಿರುತ್ತದೆ. ಅಂತೆಯೇ, ದೇಶದಲ್ಲಿ ನ್ಯಾಯ ಮತ್ತು ಮಾನವ ಗೌರವಕ್ಕಾಗಿ ಹೋರಾಟವನ್ನು ಮುಂದುವರಿಸುತ್ತಿದೆ. ಸಮಾಜದಲ್ಲಿನ ಸುಮನಸ್ಕರು ಹಾಗೂ ಜವಾಬ್ದಾರಿಯುತ ನಾಗರಿಕರು ಇಂತಹ ಅನ್ಯಾಯಗಳ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಲು ನಾವು ಕರೆ ನೀಡುತ್ತೇವೆ. ನ್ಯಾಯ ಮತ್ತು ಶಾಂತಿ ನಮ್ಮ ದೇಶದಲ್ಲಿ ನೆಲೆಸಲಿ ಎಂಬುವುದೇ ನಮ್ಮ ಒತ್ತಾಸೆಯಾಗಿರುತ್ತದೆ ಎಂದು ರೆವರೆಂಡ್ ಗೋಲ್ಡಿನ್ ಜೆ. ಬಂಗೇರ ಕಾರ್ಯದರ್ಶಿ, ಡಾ| ಸೆಬಾಸ್ಟಿಯನ್ ಕೆ.ವಿ. ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿಗಳಾದ ವಂದನೀಯ ಫಾದರ್ ರೂಪೇಶ್ ಮಾಡ್ತಾ ಹಾಗೂ ರೆವರೆಂಡ್ ಎಮ್. ಪ್ರಭುರಾಜ್ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




