January 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಸ ಗುಡಿಸಿದ್ದವನ ಬಳಿ 100 ಕೋಟಿ ರೂಪಾಯಿ ಆಸ್ತಿ

ಕೊಪ್ಪಳ ಗುತ್ತಿಗೆ ಸಿಬ್ಬಂದಿ ಮೇಲೆ ಲೋಕಾಯುಕ್ತ ದಾಳಿ – 24 ಮನೆ, 50 ನಿವೇಶನ, 40 ಎಕ್ರೆ ಭೂಮಿ ಪತ್ತೆ

ಕೊಪ್ಪಳ ನಗರದ ಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ ಅಭಿವೃದ್ಧಿ ನಿಗಮ) ನಲ್ಲಿ ಕೆಲ ವರ್ಷ ಹೊರಗುತ್ತಿಗೆ ಕಚೇರಿ ಸಹಾಯಕನಾಗಿ ಸೇವೆ ಸಲ್ಲಿಸಿದ್ದ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕಳಕಪ್ಪ ನಿಡಗುಂದಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಜುಲಾಯಿ 31ರಂದು ಗುರುವಾರ ದಾಳಿ ನಡೆಸಿದ್ದು, ಈ ವೇಳೆ 24 ಮನೆಗಳು, 50 ನಿವೇಶನ, 40 ಎಕರೆ ಜಮೀನು, ಬಂಗಾರ, ಬೆಳ್ಳಿ ಸೇರಿದಂತೆ 100 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡ ಈತ ನಂತರ ಕಚೇರಿ ಸಹಾಯಕ ಎಂದು ಹೊರಗುತ್ತಿಗೆ ಆಧಾರದಲ್ಲಿ ಕೆಆರ್‌ಐಡಿಎಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. 2003ರಿಂದ 2024ರ ಅವಧಿಯಲ್ಲಿ ಈತ ಕೊಪ್ಪಳ ಕೆಆರ್‌ಐಡಿಎಲ್ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದು, ಈ ಅವಧಿಯಲ್ಲಿ ಅಪಾರ ಆಸ್ತಿ ಗಳಿಸಿದ್ದಾನೆ ಎಂಬ ಆರೋಪ ಇತ್ತು.

ಲೋಕಾಯುಕ್ತಕ್ಕೆ ದೂರು: – ಜಿಲ್ಲೆಯಲ್ಲಿ ಕೆಆರ್‌ಐಡಿಎಲ್ ಇಲಾಖೆಯಿಂದ 2022-24ರ ವರೆಗೆ ನಡೆದ ಕಾಮಗಾರಿಗಳಲ್ಲಿ ₹72 ಕೋಟಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯಕಾರ್ಯನಿರ್ವಾಹಕ ಎಂಜಿನಿಯರ್ ಝಡ್.ಎಂ. ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ಕಚೇರಿ ಸಹಾಯಕ ಕಳಕಪ್ಪ ನಿಡಗುಂದಿ ವಿರುದ್ಧ ದೂರು ದಾಖಲಾಗಿತ್ತು. ಈ ಅಕ್ರಮ ಕುರಿತು ಈಗಿನ ಕೆಆರ್‌ಐಡಿಎಲ್ ಅಧಿಕಾರಿಗಳೇ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಹೀಗಾಗಿ, ಇಬ್ಬರನ್ನೂ ಅಮಾನತು ಮಾಡಲಾಗಿತ್ತು. ಈ ಮಧ್ಯೆ, ಇಇ ಝಡ್ ಎಂ. ಚಿಂಚೋಳಿಕರ್ ಅವರು ನ್ಯಾಯಾಲಯದ ಮೂಲಕ ಅಮಾನತು ಆದೇಶಕ್ಕೆ ತಡೆಯಾಜ್ಞೆ ತಂದು ದಾವಣಗೆರೆಯ ಅದೇ ಇಲಾಖೆಯ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

2022-24ರಲ್ಲಿ, ಮೂರು ವರ್ಷದ ಅವಧಿಯಲ್ಲಿ ನಿಗಮದಲ್ಲಿ ನಡೆದ 108 ಕಾಮಗಾರಿಗಳಲ್ಲಿನ ₹72 ಕೋಟಿ ಅಕ್ರಮದಲ್ಲಿನ ಸೂತ್ರದಾರನೇ ಕಳಕಪ್ಪ ನಿಡಗುಂದಿ ಆಗಿದ್ದರಿಂದ ಗುರುವಾರ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳು ಭಾಗ್ಯನಗರ ಹಾಗೂ ಕೊಪ್ಪಳದಲ್ಲಿರುವ ಅವನ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಅಂದಾಜಿನ ಪ್ರಕಾರ ಈತನ ಬಳಿ ₹100 ಕೋಟಿಗೂ ಅಧಿಕ ಆಸ್ತಿ ಇದೆ ಎನ್ನಲಾಗಿದೆ. ಕೊಪ್ಪಳ ಹಾಗೂ ಭಾಗ್ಯನಗರದಲ್ಲಿ 24 ಮನೆ ಈತನ ಹೆಸರಿನಲ್ಲಿವೆ. ಬಂಡಿ, ಹಿಟ್ನಾಳ್, ಹುಲಿಗಿ ಹಾಗೂ ಯಲಬುರ್ಗಾದಲ್ಲಿ 40 ಎಕರೆ ಜಮೀನು ಈತನ ಪತ್ನಿ, ತಮ್ಮ ಹಾಗೂ ಬಾಮೈದುನನ ಹೆಸರಿನಲ್ಲಿದೆ. ಜೊತೆಗೆ, 50 ನಿವೇಶನ, ಎರಡು ಕಾರು, ಎರಡು ಬೈಕ್, 350 ಗ್ರಾಂ ಬಂಗಾರ, 1.5 ಕೆಜಿ ಬೆಳ್ಳಿಯೂ ಸಿಕ್ಕಿದೆ. ಇವುಗಳ ಜೊತೆ ಈತ ಬೇನಾಮಿ ಆಸ್ತಿಯನ್ನೂ ಹೊಂದಿದ್ದಾನೆ ಎಂದು ತಿಳಿದು ಬಂದಿದೆ.

You may also like

News

ಮಂಗಳೂರಿನಲ್ಲಿ 9ನೇ ಅಂತರ್‌ರಾಷ್ಟ್ರೀಯ ಗಾಳಿಪಟ ಉತ್ಸವ – ಜನವರಿ 17–18 ರಂದು ಬ್ಲೂ ಬೇ ಬೀಚ್‌ನಲ್ಲಿ ವೈಭವ

ಕರಾವಳಿ ಉತ್ಸವದ ಅಂಗವಾಗಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ‘ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡವು ಮಂಗಳೂರಿನ ತಣ್ಣೀರುಬಾವಿಯ ನವೀಕರಣಗೊಂಡ ಬ್ಲೂ ಬೇ ಬೀಚ್‌ನಲ್ಲಿ 9ನೇ ಅಂತರ್‌ರಾಷ್ಟ್ರೀಯ
News

ಧರ್ಮ ಕೇಳಿ ಅವಾಚ್ಯ ನಿಂದನೆ ಹಾಗೂ ಹಲ್ಲೆ – ಕೊಲೆಯತ್ನ ಪ್ರಕರಣದಲ್ಲಿ ಕಾವೂರು ಠಾಣಾ ಪೊಲೀಸರಿಂದ ಮೂವರ ಬಂಧನ

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧರ್ಮ ವಿಚಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

You cannot copy content of this page