ಛತ್ತೀಸ್‌ಗಢದಲ್ಲಿ ಕ್ರೈಸ್ತ ಸನ್ಯಾಸಿನಿಯರ ಬಂಧನ ಹಾಗೂ ಕ್ರೈಸ್ತ ಸಮುದಾಯದ ಮೇಲೆ ದೌರ್ಜನ್ಯದ ವಿರುದ್ಧ ಮಂಗಳೂರಿನಲ್ಲಿ ಆಗಸ್ಟ್ 4ರಂದು ಸಾರ್ವಜನಿಕ ಬೃಹತ್ ಪ್ರತಿಭಟನೆ
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ನೇತೃತ್ವ

ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಇವರಿಂದ ಪತ್ರಿಕಾ ಗೋಷ್ಠಿ

ದೇಶಾದ್ಯಂತ ಕ್ರೈಸ್ತ ಧರ್ಮಗುರುಗಳು, ಧರ್ಮಭಗಿನಿಯರು ಮತ್ತು ಕ್ರೈಸ್ತರು ಶಾಂತಿ ಪ್ರಿಯರಾಗಿದ್ದು, ದೇಶಭಕ್ತಿಯನ್ನು ಹೊಂದಿದವರಾಗಿರುತ್ತಾರೆ. ದೇಶಾದ್ಯಂತ ಕ್ರೈಸ್ತ ಸಮುದಾಯದವರು ಕೇವಲ 3% ಜನಸಂಖ್ಯೆಯನ್ನು ಹೊಂದಿದ್ದರೂ, ಈ ಸಮುದಾಯವು ವೈದ್ಯಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಾ ಬಂದಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಮಣಿಪುರ, ಒರಿಸ್ಸಾ ಮತ್ತು ಇತರ ರಾಜ್ಯಗಳಲ್ಲಿ ನಿರಪರಾಧಿಗಳಾದ ಕ್ರೈಸ್ತ ಸಮುದಾಯದ ಮೇಲೆ ದೌರ್ಜನ್ಯ ಹಾಗೂ ಹಲ್ಲೆಗಳು ಹೆಚ್ಚಾಗುತ್ತಿದ್ದು, ಇದರಿಂದ ಕ್ರೈಸ್ತ ಧರ್ಮೀಯರು ಭಯಭೀತರಾಗಿದ್ದಾರೆ. ಇತ್ತೀಚೆಗೆ ಜುಲಾಯಿ 25ರಂದು ಛತ್ತೀಸ್‌ಗಢದಲ್ಲಿ ನಡೆದಿರುವ ಘಟನೆ ಬೃಹತ್ ಆಘಾತ ಉಂಟುಮಾಡಿದೆ. ಕೇರಳದ ಸಿಸ್ಟರ್ ಆಫ್ ಮೇರಿ ಇಮ್ಯಾಕ್ಯುಲೇಟ್ ಆಫ್ ಅಸ್ಸಿಸಿಯ ಸದಸ್ಯರಾದ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಮೇರಿ ಎಂಬ ಇಬ್ಬರು ಸನ್ಯಾಸಿನಿಯರನ್ನೂ ಸೇರಿದಂತೆ, ಛತ್ತೀಸ್‌ಘಡದ ನಾರಾಯಣಪುರ ಜಿಲ್ಲೆಯ ಮೂರು ಮಹಿಳೆಯರನ್ನು ರೈಲು ನಿಲ್ದಾಣದ ಬಳಿ ಬಂಧಿಸಲಾಗಿದ್ದು, ಇವರ ವಿರುದ್ಧ ಧಾರ್ಮಿಕ ಮತಾಂತರದ ಆರೋಪ ಮಾಡಿದ್ದಾರೆ.

ಮನೆ ಕೆಲಸಕ್ಕಾಗಿ ಮಹಿಳೆಯರನ್ನು ಕರೆದೊಯ್ಯುವಾಗ ಅವರ ಮೇಲೆ ಸುಳ್ಳು ಮತಾಂತರ ಆರೋಪ ಹಾಕಿದ ಘಟನೆ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆ. ಈ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟಲು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಗುವುದು. ಬಂಧಿಸಿದ ಕ್ರೈಸ್ತ ಸನ್ಯಾಸಿನಿಯರನ್ನು ಕೂಡಲೇ ಬಿಡುಗಡಗೆ ಕೋರಲಾಗಿದೆ. ಇಂತಹ ಭಯಾನಕ ಘಟನೆಗಳನ್ನು ವಿರೋಧಿಸಿ ಆಗಸ್ಟ್ 4ರಂದು ಸೋಮವಾರ ಸಂಜೆ 4.00 ಗಂಟೆಗೆ ಮಂಗಳೂರು ಮಿನಿವಿಧಾನಸೌಧದ ಎದುರು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ನೇತೃತ್ವದಲ್ಲಿ ಬೃಹತ್ ಸಾರ್ವಜನಿಕ ಪ್ರತಿಭಟನಾ ಸಭೆ ಏರ್ಪಡಿಸಲಾಗಿದೆ.

ಈ ಪ್ರತಿಭಟನಾ ಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಮಾಜಿ ಅಧ್ಯಕ್ಷ ಹಾಗೂ ಕಥೊಲಿಕ್ ಸಭಾ ಸಂಘಟನೆಯ ಸಾರ್ವಜನಿಕ ಸಂರ್ಪಾಧಿಕಾರಿ ಪಾವ್ಲ್ ರೋಲ್ಫಿ ಡಿಕೋಸ್ತಾ, ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ತೆಲಿನೊ, ಸಿಆರ್‌ಐ ಅಧ್ಯಕ್ಷರಾದ ವಂದನೀಯ ಫಾದರ್ ಡೊಮಿನಿಕ್ ವಾಸ್ ಒಸಿಡಿ, ಸಿಸ್ಟರ್ ಸೆನ್ ಮಿನೇಜಸ್ ಎಸ್ಎಪಿ, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಹಾಗೂ ಮಾಜಿ ಅಧ್ಯಕ್ಷ –ಸ್ಟ್ಯಾನಿ ಲೋಬೊ ಸಭೆಯನ್ನು ಉದ್ದೇಶಿಸಿ ಮಾತನಾಡಲಿರುವರು.

ಈ ಸಭೆಗೆ ಮುಕ್ತವಾಗಿ ಸಾಮಾಜಿಕ ದಾರ್ಶನಿಕತೆ, ಪಕ್ಷ, ಮತ, ಭೇದಗಳನ್ನು ಮರೆತು ಎಲ್ಲರೂ ಭಾಗವಹಿಸಬೇಕು. ಕ್ರೈಸ್ತ ಸಮುದಾಯಕ್ಕೆ ಉಂಟಾಗುವ ಹಿಂಸೆ ವಿರುದ್ಧ ಹೋರಾಟವನ್ನು ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ. ಇಂದು ಆಗಸ್ಟ್ 1ರಂದು ಶುಕ್ರವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಮಾಜಿ ಅಧ್ಯಕ್ಷ ಹಾಗೂ ಕಥೊಲಿಕ್ ಸಭಾ ಸಂಘಟನೆಯ ಸಾರ್ವಜನಿಕ ಸಂರ್ಪಾಧಿಕಾರಿ ಪಾವ್ಲ್ ರೋಲ್ಫಿ ಡಿಕೋಸ್ತಾ, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಉಪಸ್ಥಿತರಿದ್ದರು.




