ರಾಜ್ಯದಲ್ಲಿ ಶಾಲಾ ವೇಳೆಯಲ್ಲಿ ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ – ಶಿಕ್ಷಣ ಇಲಾಖೆಯ ಮಹತ್ವದ ಆದೇಶ
ರಾಜ್ಯದಲ್ಲಿ ಶಾಲಾ ವೇಳೆಯಲ್ಲಿ ಶಿಕ್ಷಕರ ಮೊಬೈಲ್ ಬಳಕೆಯನ್ನು ನಿಯಂತ್ರಣಕ್ಕೆ ಒಳವಡಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಶಾಲೆಗಳಲ್ಲಿ ಮೊಬೈಲ್ ಉಪಯೋಗಿಸುತ್ತಿರುವುದರಿಂದ ಬೋಧನಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವುದು ತಿಳಿದುಬಂದಿದೆ.

ಶಾಲೆಗಳಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸುವ ಸಲುವಾಗಿ ಮೊಬೈಲ್ ಗಳ ಬಳಕೆಯನ್ನು ಉಲ್ಲೇಖಿತ ಆದೇಶಗಳ ರೀವಾ ಈಗಾಗಲೇ ನಿಷೇದಿಸಲಾಗಿರುತ್ತದೆ.
ಶಾಲಾ ಮುಖ್ಯಶಿಕ್ಷಕರಿಗೆ ವಿನಾಯಿತಿ ನೀಡಲಾಗಿದ್ದರೂ ಸಹ ಅವರು ತಮ್ಮ ಬೋಧನಾ ಕಾರ್ಯದ ಅವಧಿಯಲ್ಲಿ ಮೊಬೈಲ್ ಗಳನ್ನು ಬಳಸುವುದನ್ನು ನಿಷೇಧಿಸಿದೆ ಹಾಗೂ ಯಾವುದೇ ಶಾಲೆಗಳಲ್ಲಿ ಶಾಲಾ ವೇಳೆಯಲ್ಲಿ ಮೊಬೈಲ್ ಉಪಯೋಗಿಸುತ್ತಿರುವುದು ಗಮನಕ್ಕೆ ಬಂದಲ್ಲಿ ಅಥವಾ ಈ ಸಂಬಂಧ ದೂರುಗಳು ಬಂದಲ್ಲಿ ಶಾಲೆಯ ಮುಖ್ಯ ಶಿಕ್ಷಕರೇ ಹೊಣೆಗಾರರಾಗುತ್ತಾರೆಂದು ತಿಳಿಸಿದೆ.

ಆದ್ದರಿಂದ, ಶಾಲೆಗಳ ಶಿಸ್ತನ್ನು ಕಾಪಾಡಿ, ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗದಂತೆ ಕ್ರಮವಹಿಸುವ ಸಲುವಾಗಿ, ತಾಲೂಕಿನ ಪ್ರತಿಯೊಂದು ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಮೊಬೈಲ್ ಉಪಯೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕೆಳಗಿನ ಕ್ರಮವನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸಲು ತಿಳಿಸಿದೆ.
- ಮುಖ್ಯೋಪಾಧ್ಯಾಯರನ್ನು ಹೊರತುಪಡಿಸಿ ಇತರೆ ಎಲ್ಲಾ ಭೋದಕ ಸಿಬ್ಬಂದಿಯು ಪ್ರಾರ್ಥನೆ ಬಳಿಕ ತಮ್ಮ ಮೊಬೈಲನ್ನು ಮುಖ್ಯೋಪಾಧ್ಯಾಯರ ಸುಪರ್ದಿಯಲ್ಲಿ ಹಸ್ತಾಂತರಿಸಬೇಕು.
- ತರಗತಿಗಳ ಅವಧಿಯಲ್ಲಿ ಮೊಬೈಲ್ ಬಳಕೆ ನಿಷಿದ್ಧವಾಗಿರಬೇಕು.
- ವಿದ್ಯಾರ್ಥಿಗಳಿಗೆ ಹೆಚ್ಚಿನ ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಸೂಚಿಸಿದೆ.
ಈ ಸೂಚನೆಯ ಪ್ರಭಾವದಿಂದ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯಿದೆ.




