ಭಟ್ಕಳದಲ್ಲಿ ಅಡಿಕೆ ಕಳ್ಳತನ – ಐವರು ಶಂಕಿತರ ಬಂಧನ, ಒಬ್ಬ ಪರಾರಿ
ಭಟ್ಕಳ ತಾಲೂಕಿನ ಮಾರುತೇರಿ ಗ್ರಾಮದ ಕೊಗೊಂಡದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಶಂಕಿತರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿತ ಪರಾರಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳೀಯ ರೈತ 76 ವರ್ಷ ಪ್ರಾಯದ ನಾಗಪ್ಪಯ್ಯರವರು ನೀಡಿದ ದೂರಿನಂತೆ, ಜುಲಾಯಿ 16ರ ರಾತ್ರಿ 7 ಗಂಟೆಯಿಂದ ಜುಲಾಯಿ 17ರ ಬೆಳಿಗ್ಗೆ 7 ಗಂಟೆ ನಡುವಿನ ಅವಧಿಯಲ್ಲಿ, ಸುಮಾರು 250 ಕೆ.ಜಿ. ಅಡಿಕೆ (ಸಿಪ್ಪೆ ಸಮೇತ), ಅಂದಾಜು ₹70,000 ಮೌಲ್ಯದಷ್ಟು ಅಡಿಕೆಯನ್ನು ಅವರ ಹಳೆಯ ಮನೆಯಿಂದ ಕಳ್ಳರು ದೋಚಿಕೊಂಡಿದ್ದಾರೆ.

ಕಳ್ಳತನದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯವರು ತಕ್ಷಣ ತನಿಖೆ ಪ್ರಾರಂಭಿಸಿ, ಶಂಕಿತರಿಂದ ಮಾಹಿತಿ ಸಂಗ್ರಹಿಸಿದರು. ತನಿಖೆಯಲ್ಲಿ ಈ ಕೆಳಕಂಡ ಶಂಕಿತರ ಬಗ್ಗೆಯೂ ತಪಾಸಣೆ ನಡೆಯಿತು: ಮೊಹಮ್ಮದ್ ಸಾಧಿಕ್ ಶೇಖ್ (26) – ಬಿಳಾಲಖಂಡ ಗುಳ್ಳೆ, ಭಟ್ಕಳ, ಮೊಹಮ್ಮದ್ ಖಾಜಾ (26) – ಬಿಳಾಲಖಂಡ ಗುಳ್ಳೆ, ಭಟ್ಕಳ, ಮೊಹಮ್ಮದ್ ಇರ್ಶಾದ್ (28) – ಮೂಸಾನಗರ, ಯೂಸೂಪ ಹಳ್ಳಿ ಹತ್ತಿರ, ಮೊಹಮ್ಮದ್ ಮುಸಾದಿಕ್ (36) – ಅಡಿಕೆ ವ್ಯಾಪಾರಿ, ಮೂಸಾನಗರ, ಮೊಹಮ್ಮದ್ ನಿಜಾಮ್ – ಹೆತ್ತಾರ ಹೆಬಳೆ, ಭಟ್ಕಳ (ಪರಾರಿ). ಭಟ್ಕಳ ಪೊಲೀಸರು ಮೇಲಿನ ಎ1 ಹಾಗೂ ಎ2 ನನ್ನು ಆಗಸ್ಟ್ 7ರಂದು ಗುರುವಾರ ಬೆಳಿಗ್ಗೆ 9:30ಕ್ಕೆ, ಎ3 ಮತ್ತು ಎ4 ಅವರನ್ನು ಅದೇ ದಿನ ಸಂಜೆ 7 ಗಂಟೆಗೆ ದಸ್ತಗಿರಿ ಮಾಡಿದ್ದಾರೆ.

ಪರಾರಿಯಾಗಿರುವ ಎ5, ಮೊಹಮ್ಮದ್ ನಿಜಾಮ್ ನನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯ ಜನರಲ್ಲಿ ಆತಂಕ ಪಡಬೇಕಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಗೊಂಡ ಗ್ರಾಮದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸಿದ್ದು, ಒಟ್ಟು ನಾಲ್ಕು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತರಿಂದ ಒಟ್ಟು 175 ಕೆ.ಜಿ. ಅಡಿಕೆಯನ್ನು ಮತ್ತು ಕೃತ್ಯಕ್ಕೆ ಬಳಸಿದ KA20,1644 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದ್ದು, ಭದ್ರತಾ ಕ್ರಮಗಳು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.




