ಉಡುಪಿ ಪಡುಬಿದ್ರಿಯಲ್ಲಿ 400 ಕೆವಿ ಹೈಟೆನ್ಶನ್ ಪವರ್ ವಿದ್ಯುತ್ ತಂತಿ ಕಾಮಗಾರಿ
ಖಾಸಗಿ ಜಮೀನಿನಲ್ಲಿ ಕಾಮಗಾರಿ ನಡೆಸಲು ಹಕ್ಕಿಲ್ಲ– ಸ್ಥಳೀಯರ ಆಕ್ರೋಶ

ಕಥೊಲಿಕ್ ಸಭಾ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ
ಪಡುಬಿದ್ರಿಯಲ್ಲಿ ನೆಲೆಗೊಂಡಿರುವ ನಾಗಾರ್ಜುನ ಪವರ್ ಪ್ರಾಜೆಕ್ಟ್ ವತಿಯಿಂದ ಕಾಸರಗೋಡು ಹಾಗೂ ಇತರ ರಾಜ್ಯಗಳಿಗೆ ಹಾದು ಹೋಗುವ 400 ಕೆವಿ ಹೈಟೆನ್ಶನ್ ಪವರ್ ವಿದ್ಯುತ್ ತಂತಿ ಎಳೆಯುವ ಕಾಮಗಾರಿಯು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಖಾಸಗಿ ಜಮೀನಿನ ಮಾಲೀಕರಿಗೆ ಯಾವುದೇ ಮುಂಚಿತ ಮಾಹಿತಿ ನೀಡದೇ ಕದ್ದುಮುಚ್ಚಿ ಕಾಮಗಾರಿ ನಡೆಯುತ್ತಿರುವುದಾಗಿ ಆರೋಪಿಸಲಾಗಿದೆ. ಖಾಸಗಿ ಜಮೀನಿನಲ್ಲಿ ಇಂತಹ ಕಾಮಗಾರಿ ನಡೆಸಲು ಕಂಪನಿಗೆ ಹಕ್ಕಿಲ್ಲವೆಂದು ಜನರು ಪ್ರಶ್ನೆ ಎತ್ತಿದ್ದಾರೆ.




ಕಳೆದ ಏಳು ವರ್ಷಗಳಿಂದ ಈ ಯೋಜನೆಗೆ ವಿರುದ್ಧವಾಗಿ ಸ್ಥಳೀಯರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ಕುಪ್ಪೆಪದವು–ಸಿದ್ಧಕಟ್ಟೆ ರಸ್ತೆಯ ಬದಿಯಲ್ಲಿರುವ 32 ಸೆಂಟ್ಸ್ ಜಮೀನಿನ ಮಾಲೀಕೆಯಾದ ವಿಧವೆ ಮಹಿಳೆಯ ಭೂಮಿಯ ಮಧ್ಯದಿಂದ 400 ಕೆವಿ ಹೈ ಪವರ್ ತಂತಿ ಹಾದು ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಇದರಿಂದ ಆ ಮಹಿಳೆ ತನ್ನ ಜಮೀನಿನ ಬಹುಭಾಗವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕಥೊಲಿಕ್ ಸಭಾ ನೇತೃತ್ವದಲ್ಲಿ ಈ ಕುರಿತು ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳೀಯರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಜನರ ಅಭಿಪ್ರಾಯದಂತೆ, ಜನರ ಹಕ್ಕುಗಳನ್ನು ಲೆಕ್ಕಿಸದೆ ನಡೆಯುತ್ತಿರುವ ಈ ಕಾಮಗಾರಿ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹ ವ್ಯಕ್ತವಾಗಿದೆ.





ಕಥೊಲಿಕ್ ಸಭಾ ಮಂಗ್ಳುರು ಪ್ರದೇಶ್ (ರಿ.) ಇದರ ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮಾಜಿ ಅಧ್ಯಕ್ಷ ಹಾಗೂ ಮಾಧ್ಯಮ ಸಂಪರ್ಕ ಅಧಿಕಾರಿ ಪಾವ್ಲ್ ರೋಲ್ಫಿ ಡಿಕೋಸ್ತಾ, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ತೆಲಿನೊ, ಆಲ್ಫೋನ್ಸ್ ಡಿಸೋಜ ನಿಡ್ಡೋಡಿ, ಚಂದ್ರಹಾಸ ಶೆಟ್ಟಿ ಇನ್ನಾ, ರೂಪೇಶ್ ಡಿಸೋಜ ಬಂಟ್ವಾಳ, ಕೃಷ್ಣ ಪ್ರಸಾದ್ ತಂತ್ರಿ, ಬೆನೆಡಿಕ್ಟಾ ಕಾರ್ಲೊ, ಜೆಸಿಂತಾ ಲೋಬೊ, ಜೆನೆಟ್ ವಾಜ್ ಮತ್ತು ಸ್ಥಳೀಯ ನಿವಾಸಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಪಾವ್ಲ್ ರೋಲ್ಫಿ ಡಿಕೋಸ್ತರವರು ಎಚ್ಚರಿಕೆ ನೀಡುತ್ತಾ — “ಈ ಏಕಪಕ್ಷೀಯ ಕಾಮಗಾರಿಯನ್ನು ನಿಲ್ಲಿಸದಿದ್ದರೆ ನಾವೇ ಅದನ್ನು ನಿಲ್ಲಿಸುತ್ತೇವೆ. ತಪ್ಪಾದ ಕಾನೂನು ಕ್ರಮ ಕೈಗೊಂಡು ಜೈಲಿಗೆ ಹಾಕಿದರೂ ಪ್ರತಿಭಟನೆ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾರೆ. ಇದಲ್ಲದೆ, ಮೊನ್ನೆ ಬಜ್ಪೆ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಎಳೆದುಕೊಂಡು ಹಿಂಸೆ ನೀಡಿದ ಘಟನೆ ಸ್ಥಳೀಯರಲ್ಲಿ ಮತ್ತಷ್ಟು ಆಕ್ರೋಶ ಹುಟ್ಟಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಇದರ ಅಧ್ಯಕ್ಷ ರೂಪೇಶ್ ರೈ ಅಲಿಮಾರ್, ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಮತ್ತು ಸದಸ್ಯ ಇಬ್ರಾಹಿಂ ಕಲೀಲ್ ಕುಚ್ಚತಡ್ಕ ಇವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.




