ಆರ್‌ಟಿಐ ಮಾಹಿತಿ ನೀಡದ್ದಕ್ಕೆ ನಿರ್ಮಿತಿ ಕೇಂದ್ರಕ್ಕೆ ₹50,000 ದಂಡ – ಹೈಕೋರ್ಟ್
ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ನಿರ್ಮಿತಿ ಕೇಂದ್ರ ಸಾರ್ವಜನಿಕ ಪ್ರಾಧಿಕಾರವಾಗಿದ್ದು, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಬರಲಿದೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಆರ್‌ಟಿಐ ಅಡಿ ಮಾಹಿತಿ ಒದಗಿಸಲು ನಿರಾಕರಿಸಿದ್ದ ಚಿತ್ರದುರ್ಗದ ನಿರ್ಮಿತಿ ಕೇಂದ್ರಕ್ಕೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ಆರ್‌ಟಿಐ ಅಡಿ ಕೋರಿದ್ದ ಮಾಹಿತಿ ಒದಗಿಸುವಂತೆ ಸೂಚಿಸಿ ರಾಜ್ಯ ಮಾಹಿತಿ ಹಕ್ಕು ಆಯೋಗ ಹೊರಡಿಸಿದ್ದ ಆದೇಶ ರದ್ದು ಕೋರಿ ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ರವರ ಪೀಠ, ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 2 (ಎಚ್) ರಲ್ಲಿ ತಿಳಿಸಿರುವಂತೆ ಸರ್ಕಾರದ ಆದೇಶದ ಮೂಲಕ ರಚನೆಯಾದ ಸಂಸ್ಥೆ. ಸರ್ಕಾರದಿಂದ ನೇರ ಅಥವಾ ಪರೋಕ್ಷವಾಗಿ ಹಣಕಾಸಿನ ನೆರವು ಪಡೆಯುವ ಯಾವುದೇ ಸಂಸ್ಥೆ ಸಹ ಸಾರ್ವಜನಿಕ ಪ್ರಾಧಿಕಾರವಾಗಲಿದೆ.


ನಿರ್ಮಿತಿ ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ಪಡೆಯುತ್ತಿದೆ ಹಾಗೂ ಸರ್ಕಾರದ ನಿಯಂತ್ರಣದಲ್ಲಿದೆ. ಆದ್ದರಿಂದ ಕೇಂದ್ರವು ಆರ್‌ಟಿಐ ಅಡಿ ಮಾಹಿತಿ ನೀಡಬೇಕು. ಮಾಹಿತಿ ನೀಡದ ಕ್ರಮ ಒಪ್ಪಲಾಗದು ಎಂದು ತಿಳಿಸಿರುವ ನ್ಯಾಯಪೀಠವು 50 ಸಾವಿರ ರೂಪಾಯಿ ದಂಡದ ಮೊತ್ತವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ಸೂಚಿಸಿದೆ.




