ಪ್ರತಿಭಾವಂತ ಡಿ.ಜೆ. ಮರ್ವಿನ್ ರಸ್ತೆ ಅಪಘಾತದಲ್ಲಿ ದುರ್ಮರಣ
ಬೀದಿನಾಯಿಗಳು ಮತ್ತೆ ಕಸಿದುಕೊಂಡ ಜೀವ – ರಸ್ತೆ ಸುರಕ್ಷತೆಯ ಬಗ್ಗೆ ಎದ್ದ ಪ್ರಶ್ನೆ

ಬೆಳ್ಮಣ್ ಮೂಲದ 35 ವರ್ಷ ಪ್ರಾಯದ ಮರ್ವಿನ್ ಮೆಂಡೊನ್ಸಾರವರು ಇಂದು ಆಗಸ್ಟ್ 23ರಂದು ಶನಿವಾರ ರಸ್ತೆ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಉಡುಪಿ–ಮಂಗಳೂರು ಮಾರ್ಗದಲ್ಲಿ ಮೂಲೂರು ಹತ್ತಿರ ಕಾರು ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಆ ವೇಳೆ ಅವರು ವೀಡಿಯೋ ಎಡಿಟರ್ ಪ್ರಜ್ವಲ್ ಸುವರ್ಣ, ಪ್ರಸಾದ್, ವಿನೇಶ್ ಹಾಗೂ ಇನ್ನೊಬ್ಬರೊಂದಿಗೆ ಪ್ರಯಾಣಿಸುತ್ತಿದ್ದರು.




ಮಧ್ಯ ರಾತ್ರಿ ಸುಮಾರು 3 ಗಂಟೆಯ ಸಮಯದಲ್ಲಿ ರಸ್ತೆ ಮಧ್ಯೆ ಓಡಿಬಂದಿದ್ದ ನಾಯಿಯನ್ನು ತಪ್ಪಿಸಲು ಪ್ರಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ತಕ್ಷಣವೇ ಆಂಬುಲೆನ್ಸ್ ಸಿಬ್ಬಂದಿ ಜಲಾಲುದ್ದೀನ್, ಹಮೀದ್ ಉಚ್ಚಿಲ, ಕೆ.ಎಂ. ಸಿರಾಜ್, ಅನ್ವರ್ ಹಾಗೂ ಪೊಲೀಸರು ಗಾಯಗೊಂಡವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಸಾಗಿಸಿದರು. ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದು, ಡಿ.ಜೆ. ಮರ್ವಿನ್ ಮಾತ್ರ ಗಂಭೀರ ಗಾಯಗಳಿಂದ ಬದುಕುಳಿಯಲಿಲ್ಲ. ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರು.

ಕೇವಲ ಒಂದು ದಿನದ ಹಿಂದಷ್ಟೇ ಮರ್ವಿನ್ ತಮ್ಮದೇ ನಿರ್ದೇಶನ ಹಾಗೂ ಚಿತ್ರೀಕರಣದಲ್ಲಿ ತಯಾರಿಸಿದ ಹೊಸ ಹಾಡನ್ನು ಎಪಿಡಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದ್ದರು. ಜೊತೆಗೆ ಹಲವು ಕೊಂಕಣಿ ಹಾಗೂ ತುಳು ಚಲನಚಿತ್ರ ಯೋಜನೆಗಳಲ್ಲಿ ತಮ್ಮ ಕಲಾತ್ಮಕ ಕೆಲಸದ ಮೂಲಕ ಹೆಸರು ಮಾಡಿದ್ದರು.


ರಸ್ತೆಗಳಲ್ಲಿ ನಿರ್ಬಂಧವಿಲ್ಲದೆ ಓಡಾಡುತ್ತಿರುವ ಬೀದಿನಾಯಿಗಳು ವಾಹನ ಸವಾರರಿಗೆ ದಿನೇ ದಿನೇ ಅಪಾಯಕಾರಿಯಾಗುತ್ತಿವೆ. ಇಂತಹ ಪ್ರಾಣಾಪಾಯದ ಘಟನೆಗಳು ಬೀದಿನಾಯಿಗಳ ನಿಯಂತ್ರಣ ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದನ್ನು ಮತ್ತೊಮ್ಮೆ ನೆನಪಿಸುತ್ತವೆ.




