ಭಟ್ಕಳ ಪೊಲೀಸ್ ಇಲಾಖೆಯಿಂದ ಪಥಸಂಚಲನ
ಗಣೇಶ ಚತುರ್ಥಿ ಹಬ್ಬ – ಸಾರ್ವಜನಿಕರಿಗೆ ಸೂಚನೆ



ಗಣೇಶ ಹಬ್ಬದ ನಿಮಿತ್ತ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತು ಗಣೇಶ ಹಬ್ಬವನ್ನು ಶಾಂತಿಯಿಂದ ಆಚರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಪಥಸಂಚಲನ ನಡೆಯಿತು. ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ದೃಷ್ಟಿಯಿಂದ ಸಾರ್ವಜನಿಕರಿಗೆ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ.



ಸಾರ್ವಜನಿಕ ಶಾಂತಿ ಧಾರ್ಮಿಕ, ಜಾತಿ ಅಥವಾ ಸಮುದಾಯಗಳ ವಿರುದ್ಧ ಹಾಸ್ಯ, ನಿಂದನೆ, ಪ್ರಚೋದನಕಾರಿ ಮಾತು, ಘೋಷಣೆ, ಪೋಸ್ಟರ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವುದು ಕಾನೂನು ಅಪರಾಧವಾಗಿರುತ್ತದೆ. ಇಂತಹ ಕ್ರಿಯೆಗಳಲ್ಲಿ ತೊಡಗಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕ, ಡಿಜೆ ಮತ್ತು ಸಂಗೀತ ವಾದ್ಯಗಳನ್ನು ಸರ್ಕಾರ ನಿಗದಿಪಡಿಸಿದ ಸಮಯ ಮಿತಿಯೊಳಗೆ ಮಾತ್ರ ಬಳಸಬೇಕು. ಆಸ್ಪತ್ರೆ, ಶಾಲೆ ಮತ್ತು ಧಾರ್ಮಿಕ ಸ್ಥಳಗಳ ಹತ್ತಿರ ಅತಿಯಾಗಿ ಶಬ್ದಮಟ್ಟ ಹೆಚ್ಚಿಸುವಂತಿಲ್ಲ.


ಮೆರವಣಿಗೆ, ವಿಸರ್ಜನೆಗಳು ಪೊಲೀಸರ ಅನುಮತಿ ಪಡೆದ ಮಾರ್ಗಗಳಲ್ಲೇ ನಡೆಯಬೇಕು. ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡುವಂತೆ ವಾಹನಗಳನ್ನು ನಿಲ್ಲಿಸಬಾರದು. ವಾಹನ ಪಾರ್ಕಿಂಗ್‌ಗೆ ನಿಗದಿಪಡಿಸಿದ ಸ್ಥಳಗಳನ್ನು ಮಾತ್ರ ಬಳಸಬೇಕು. ಪ್ಲಾಸ್ಟಿಕ್ ಹಾಗೂ ಹಾನಿಕಾರಕ ವಸ್ತುಗಳನ್ನು ಬಳಸಬಾರದು. ಗಣೇಶ ಮೂರ್ತಿಯ ವಿಸರ್ಜನೆಗಾಗಿ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಗುರುತಿಸಿರುವ ಕುಂಡಗಳು, ಕೆರೆಗಳು ಅಥವಾ ನದಿಗಳಲ್ಲೇ ವಿಸರ್ಜನೆ ಮಾಡಬೇಕು. ಹಬ್ಬದ ವೇಳೆ ಮದ್ಯಪಾನ, ಅಸಭ್ಯ ವರ್ತನೆ, ಗಲಾಟೆ, ಜಗಳ ಮುಂತಾದ ಅಕ್ರಮ ಕೃತ್ಯಗಳಲ್ಲಿ ತೊಡಗಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರು ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 100 ಸಂಖ್ಯೆಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು.




