April 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ಜೈನಮಠಗಳ ಭಟ್ಟಾರಕರುಗಳಿಂದ “ಧರ್ಮ ಸಂರಕ್ಷಣಾ ಸಮಾವೇಶ”

ಸತ್ಯಕ್ಕೆ ಸದಾ ಜಯವಿದೆ. ಸತ್ಯಕ್ಕೆ ಸಾವಿಲ್ಲ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಧರ್ಮಸ್ಥಳದ ಕೀರ್ತಿಗೆ ಎಂದೂ ಚ್ಯುತಿ ಇಲ್ಲ – ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ


ಸತ್ಯ ಮತ್ತು ಅಹಿಂಸಾ ಪರಿಪಾಲಕರಾದ ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ತೊಂದರೆ ಕೊಟ್ಟವರನ್ನು ನಾವು ಬಿಡುವುದಿಲ್ಲ ಎಂದು ತಮಿಳುನಾಡು ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಆಗಸ್ಟ್ 29ರಂದು ಶುಕ್ರವಾರ ಧರ್ಮಸ್ಥಳದಲ್ಲಿ ಎಲ್ಲಾ ಜೈನಮಠಗಳ ಭಟ್ಟಾರಕರುಗಳ ನೇತೃತ್ವದಲ್ಲಿ ಆಯೋಜಿಸಿದ ಧರ್ಮ ಸಂರಕ್ಷಣಾ ಸಮಾವೇಶದ ಉದ್ದೇಶವನ್ನು ವಿವರಿಸಿದರು. ಸತ್ಯಮೇವ ಜಯತೇ ಎನ್ನುವಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿ ಬಾರದು ಎಂದು ಅವರು ಹೇಳಿದರು. ಎಲ್ಲಾ ಭಟ್ಟಾರಕರುಗಳು ದೇವಸ್ಥಾನಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಗೆ ಬರುವಾಗ ದೇವಸ್ಥಾನದಲ್ಲಿ ಮಹಾಪೂಜೆಯೊಂದಿಗೆ ಘಂಟೆ ಬಾರಿಸಿತು. ಆದುದರಿಂದ ಸಣ್ಣ ಕಳಂಕ ಮಾಯವಾಯಿತು ಎಂದು ತಮಗೆ ತಿಳಿಯಿತು ಎಂದು ಸ್ವಾಮೀಜಿ ಹೇಳಿದರು.
ರಾಮಚಂದ್ರ, ಸೀತೆಯ ಹಾಗೆ ಮಹಾಪುರುಷರಿಗೂ ಕಷ್ಟ, ಅಪವಾದ ಬರುತ್ತದೆ. ಹಾಗೆ ಧರ್ಮಸ್ಥಳಕ್ಕೆ ಬಂದ ಸಣ್ಣ ಕಳಂಕ ದೋಷ ಅಲ್ಲ. ಇಂದು ಸಣ್ಣ ಕಳಂಕವೂ ನಿವಾರಣೆಯಾಗಿದೆ.
ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ಭಟ್ಟಾರಕರುಗಳು ಮುಂದೆ ವಿಧಾನಸಭೆ ಎದುರು ಪ್ರತಿಭಟನೆ ಹಾಗೂ ಉಗ್ರ ಹೋರಾಟ ನಡೆಸುವುದಾಗಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹೆಗ್ಗಡೆಯವರು ಸಮಗ್ರ ಸಮಾಜದ ಚಕ್ರವರ್ತಿ. ಇಡೀ ರಾಷ್ಟ್ರದ ಮಹಾಪುರುಷ. ಅಧರ್ಮಿಗಳು ಷಡ್ಯಂತ್ರ ಹಾಗೂ ಅಸೂಯೆಯಿಂದ ಧರ್ಮಸ್ಥಳಕ್ಕೆ ಚ್ಯುತಿ ತರಲು ವಿಫಲಯತ್ನ ಮಾಡಿದ್ದಾರೆ. ಸರ್ವಧರ್ಮೀಯರ ಸಕಲ ಮಠ-ಮಂದಿರಗಳಿಗೂ ಸದಾ ನೆರವು, ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿರುವ ಹೆಗ್ಗಡೆಯವರ ಜೊತೆ ನಾವು ಸದಾ ಇದ್ದೇವೆ. ಹೆಗ್ಗಡೆಯವರು ಎಲ್ಲರಿಗೂ ಪೂಜ್ಯರು ಹಾಗೂ ಸರ್ವಮಾನ್ಯರು. ಜೈನಧರ್ಮೀಯರಾದ ಹೆಗ್ಗಡೆ ಸರ್ವಧರ್ಮೀಯರನ್ನೂ ಸಮಾನ ಪ್ರೀತಿ-ವಿಶ್ವಾಸದಿಂದ ನೋಡುತ್ತಾರೆ, ಗೌರವಿಸುತ್ತಾರೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ಅಭಿನಂದನಾ ಭಾಷಣ ಮಾಡಿದ ಖ್ಯತ ಸಾಹಿತಿ ನಾಡೋಜಾ ಹಂಪನಾ (ಹಂಪ ನಾಗರಾಜಯ್ಯ) ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಂದ್ರಿಯ ನಿಗ್ರಹ, ತಾಳ್ಮೆ, ಸಂಯಮ, ಗಾಭೀರ್ಯ, ಸ್ಥಿತಪ್ರಜ್ಞ ಶಕ್ತಿಯ ಪ್ರತಿಭೆ ವರ್ಣಿಸಲಸದಳವಾಗಿದೆ. ಅವರ ಮೌನದ ಶಕ್ತಿ ಮತ್ತು ಮೌಲ್ಯ ಕರ್ನಾಟಕದ ಮನೆಮಾತಾಗಿದೆ ಎಂದು ಶ್ಲಾಘಿಸಿ, ಅಭಿನಂದಿಸಿದರು.
ಕಲುಷಿತ ವಾತಾವರಣದಿಂದ ಯುವಜನರ ಮನಸ್ಸು ಹಾಳಾಗಿದೆ. ಭಿನ್ನಾಭಿಪ್ರಾಯ ಬಂದಾಗ ಅದನ್ನು ಪರಿಹರಿಸುವ ಜವಾಬ್ಧಾರಿ ಹಿರಿಯರಿಗಿದೆ. ಸತ್ಯದ ಸ್ವರೂಪವನ್ನು ಅವರಿಗೆ ತಿಳಿಸಬೇಕು. ಏನೇ ಆಗಲಿ ಷಡ್ಯಂತ್ರದಿ೦ದ ಆದ ಸಣ್ಣ ಕಳಂಕ ನಿವಾರಣೆಯಾಗಿದೆ. ಅಗ್ನಿಪರೀಕ್ಷೆಯಲ್ಲಿ ಹೆಗ್ಗಡೆಯವರು ಉತ್ತೀರ್ಣರಾಗಿ ಸತ್ಯದ ಸಾಕ್ಷಾತ್ಕಾರವಾಗಿದೆ. ಹೆಗ್ಗಡೆಯವರ ಬೀಡಿನಲ್ಲಿ (ಮನೆಯಲ್ಲಿ), ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿಯ ತಂಗಾಳಿ ಸದಾ ಬೀಸುತ್ತಿರಲಿ ಎಂದು ಹಂಪನಾ ಹಾರೈಸಿದರು.

ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹೆಗ್ಗಡೆಯವರು ಮಾನವ ಅಲ್ಲ, ದೇವಮಾನವ ಎಂದು ಬಣ್ಣಿಸಿದರು. ಧರ್ಮಸ್ಥಳವು ಸರ್ವಧರ್ಮೀಯರ ಮನೆಗಳನ್ನು ಹಾಗೂ ಮನಗಳನ್ನು ಬೆಳಗುವ “ನಂದಾದೀಪ”ವಾಗಿದೆ. ಅದನ್ನು ನಂದಿಸಲು ಹೋದರೆ ಧರೆಯ ಹೊತ್ತಿ ಉರಿಯಬಹುದು ಎಂದು ಭವಿಷ್ಯ ನುಡಿದರು. ಶ್ರವಣಬೆಳಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಜೈನಧರ್ಮ ಮತ್ತು ಹಿಂದೂ ಧರ್ಮ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದೆ. ಹಿಂದೂಗಳನ್ನು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ. 800 ವರ್ಷಗಳ ಹಿಂದೆ ತಮ್ಮ ವಾಸ್ತವ್ಯದ ಮನೆಯನ್ನೆ ಧರ್ಮದೇವತೆಗಳಿಗಾಗಿ ಬಿಟ್ಟುಕೊಟ್ಟವರು ಹೆಗ್ಗಡೆ ಪರಂಪರೆಯವರು. ಇಲ್ಲಿನ ಸರ್ವಧರ್ಮ ಸಮನ್ವಯ ಹಾಗೂ ಚತುರ್ವಿದ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮ ಮತ್ತು ಧರ್ಮಸ್ಥಳದ ಸಂರಕ್ಷಣೆ ತಾವೆಲ್ಲರೂ ಹೆಗ್ಗಡೆಯವರ ಜೊತೆ ಇದ್ದೇವೆ ಎಂದು ಸ್ವಾಮೀಜಿ ಭರವಸೆ ನೀಡಿದರು.

ತಮ್ಮ ಪೂರ್ವಾಶ್ರಮದಲ್ಲಿ ಉಜಿರೆಯಲ್ಲಿ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ ಸಿದ್ಧವನ ಗುರುಕುಲ ಹಾಗೂ ಪದವಿಪೂರ್ವ ಕಾಲೇಜು ಶಿಕ್ಷಣ ಹಾಗೂ ಸ್ವಯಂ ಸೇವಕನಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು. ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಸಂರಕ್ಷಣೆಗಾಗಿ ಧರ್ಮಸ್ಥಳದ ವತಿಯಿಂದ ಮಾಡುತ್ತಿರುವ ಸೇವಾಕಾರ್ಯ ವಿಶ್ವಮಾನ್ಯವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಮಾಡಿದ ಗ್ರಾಮಾಭಿವೃದ್ಧಿ ಯೋಜನೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಆರೋಗ್ಯ, ಶಿಕ್ಷಣ ಮತ್ತು ಇತರ ಬಹುಮುಖ ಸೇವಾ ಕಾರ್ಯಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದರು. ದೂರುದಾರನ ಸುಳ್ಳು ಮಾತು ಕೇಳಿ ತೆಗೆಸಿದ ಹೊಂಡಗಳಲ್ಲಿ ಗಿಡಗಳನ್ನಾದರೂ ನೆಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಸೋಂದಾ ಮಠದ ಭಟ್ಟಾಕಳಂಕ ಸ್ವಾಮೀಜಿ ಮಾತನಾಡಿ, ಸತ್ಯವು ಸದಾ ಪರಿಶುದ್ಧವಾಗಿರುತ್ತದೆ. ಜೈನರು ಹಾಗೂ ಜೈನಧರ್ಮದ ಬಗ್ಯೆ ಎಂದೂ ಅವಹೇಳನ ಸಲ್ಲದು ಎಂದರು.
ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮದಲ್ಲಿ ರಾಜಕೀಯ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಕಿವಿಮಾತು ಹೇಳಿದರು. ತಮಗೆ ಸ್ವಾಮೀಜಿ ಆಗಿ ಪಟ್ಟಾಭಿಷೇಕ ಆಗುವಾಗ “ಅಪೇಕ್ಷೆ ಪಡಬೇಡಿ, ಉಪೇಕ್ಷೆ ಮಾಡಬೇಡಿ” ಎಂದು ಹೆಗ್ಗಡೆಯವರು ಹೇಳಿದ ಕಿವಿಮಾತನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು. ನಮ್ಮ ಸನಾತನ ಧರ್ಮ ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ. ಧರ್ಮಸ್ಥಳದ ಬಗ್ಯೆ ಅಸೂಯೆಯಿಂದ ಅಪಪ್ರಚಾರ ಮಾಡುವವರು “ಮಾನಸಿಕ ಭಯೋತ್ಪಾದಕರು” ಎಂದು ಸ್ವಾಮೀಜಿ ಬಣ್ಣಿಸಿದರು.

ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜಸ್ಥಾನದ ತಿಜಾರ ಮಠದ ಸೌರಭಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಶುಭ ಹಾರೈಸಿ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಜೊತೆ ಸದಾ ತಾವೆಲ್ಲರೂ ಸೇವೆಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಾದ್ರಪದ ಮಾಸದಲ್ಲಿ ದಶಲಕ್ಷಣ ಪರ್ವ ಆಚರಣೆಯ ಶುಭಾವಸರದಲ್ಲಿ ಎಲ್ಲಾ ಮಠಾಧೀಶರುಗಳ ದರ್ಶನ ಭಾಗ್ಯ ಲಭಿಸಿರುವುದು ಅತೀವ ಸಂತಸವಾಗಿದೆ ಎಂದರು. ಸತ್ಯ, ಅಹಿಂಸೆ, ತ್ಯಾಗ, ಬ್ರಹ್ಮಚರ್ಯ ಇತ್ಯಾದಿ ದಶಧರ್ಮಗಳನ್ನು ಜೈನರು ನಿತ್ಯವೂ ಪಾಲಿಸುತ್ತಾರೆ. ಇಂತಹ ಪವಿತ್ರಪರ್ವದ ಸಂದರ್ಭದಲ್ಲಿ ಎಲ್ಲಾ ಭಟ್ಟಾರಕರುಗಳು ತಮಗೆ ಹಾಗೂ ಧರ್ಮಸ್ಥಳಕ್ಕೆ ಬೆಂಬಲ ನೀಡಿ, ನಿಮ್ಮ ಜೊತೆ ಸದಾ ಇದ್ದೇವೆ ಎಂದು ಭರವಸೆ ನೀಡಿರುವುದು ತಮಗೆ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು. ತತ್ವ, ಸಿದ್ಧಾಂತ, ಧರ್ಮ ಇರುವುದು ಕೇವಲ ಓದಲು, ಉಪದೇಶಕ್ಕೆ ಮಾತ್ರ ಅಲ್ಲ. ಅದನ್ನು ನಾವು ನಿತ್ಯವೂ ಪಾಲಿಸಬೇಕು. “ಸಮ್ಯಕ್‌ದರ್ಶನ, ಜ್ಞಾನ ಚಾರಿತ್ರಾಣಿ ಮೋಕ್ಷ ಮಾರ್ಗಃ” ಎಂಬುದು ಜೈನ ಧರ್ಮದ ಸಾರವಾಗಿದೆ. ಅಂದರೆ ಸರಿಯಾದ ತತ್ವ ಸಿದ್ಧಾಂತಗಳ ಬಗ್ಗೆ ನಂಬಿಕೆ, ತಿಳುವಳಿಕೆ (ಜ್ಞಾನ) ಮತ್ತು ಆಚರಣೆಯಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದು ಜೈನ ಸಿದ್ಧಾಂತವಾಗಿದೆ. ಇದರ ಪ್ರತೀಕವಾಗಿ ಮೂರು ಎಳೆಗಳಿರುವ ಜನಿವಾರ (ಯಜ್ಞೋಪವೀತ) ವನ್ನು ಜೈನರು ಧರಿಸುತ್ತಾರೆ. ಇಂತಹ ಸಾತ್ವಿಕ ಹಾಗೂ ನೈತಿಕ ಜೀವನದಿಂದ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿ ಹೆಗ್ಗಡೆಯವರು ಎಲ್ಲಾ ಭಟ್ಟಾರಕರುಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಮತ್ತು ಸೋನಿಯಾ ವರ್ಮ ಉಪಸ್ಥಿತರಿದ್ದರು.

You may also like

News

ಆರಿಫ್ ಹತ್ಯೆ ಪ್ರಕರಣ – ಏಳು ಮಂದಿ ಪ್ರಮುಖ ಆರೋಪಿಗಳ ಬಂಧನ

ಮಂಗಳೂರು ಪೊಲೀಸ್ ಕಮೀಷನರ್ ಅವರಿಂದ ಪತ್ರಿಕಾ ಪ್ರಕಟನೆ ನಗರದ ಆರಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಮಹತ್ವದ ಪ್ರಗತಿ ಸಾಧಿಸಿದ್ದು, ಏಳು ಮಂದಿ ಪ್ರಮುಖ ಆರೋಪಿಗಳನ್ನು
News

Mangalore Physiocon 2026 – Pre-Conference Hands-on Workshop at Father Muller College of Physiotherapy

The Pre-conference Hands-on Workshop of Mangalore Physiocon 2026 was successfully conducted by Father Muller College of Physiotherapy in association with

You cannot copy content of this page