ಕೊಂಕಣಿ ಕಲಾರತ್ನ ಎರಿಕ್ ಅಲೆಕ್ಸಾಂಡರ್ ಒಝಾರಿಯೊರವರಿಗೆ ಭಾವಪೂರ್ಣ ನಮನ
ಕೊಂಕಣಿ ಸಂಸ್ಕೃತಿಯ ಬೆಳಕಾದ ಎರಿಕ್ ನೆನಪು ಸದಾ ಜೀವಂತ

ಜಿಲ್ಲಾಡಳಿತದಿಂದ ಸರಕಾರಿ ಗೌರವ

ಕೊಂಕಣಿ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಯ ಆಕಾಶದಲ್ಲಿ ಹೊಳೆಯುತ್ತಿದ್ದ ದಿಗ್ಗಜ ನಕ್ಷತ್ರ, ವಿಶ್ವ ಕೊಂಕಣಿ ಕಲಾರತ್ನ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಒಝಾರಿಯೊರವರ ಪಾರ್ಥಿವ ಶರೀರಕ್ಕೆ ಆಗಸ್ಟ್ 31ರಂದು ಭಾನುವಾರ ಮಂಗಳೂರು ನಗರವು ಕಣ್ಣೀರಿನ ನಮನ ಸಲ್ಲಿಸಿತು. ನಗರದ ವೆಲೆನ್ಸಿಯಾದ ಸಂತ ವಿನ್ಸೆಂಟ್ ಫೆರಾರ್ ಚರ್ಚ್‌ನಲ್ಲಿ ನಡೆದ ಅಂತಿಮ ಬಲಿಪೂಜೆಯಲ್ಲಿ ಗೋವಾದ ವಂದನೀಯ ಫಾದರ್ ಪ್ರತಾಪ್ ನಾಯಕ್ ಎಸ್.ಜೆ. ಆತ್ಮೀಯ ಪ್ರವಚನ ನೀಡಿದರು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ ಸಲ್ದಾನ್ಹಾ ಹಾಗೂ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜರವರು ಚರ್ಚ್‌ನಲ್ಲಿ ಗೌರವಪೂರ್ವಕವಾಗಿ ನಮನ ಸಲ್ಲಿಸಿದರು.














ಬಳಿಕ ಜಿಲ್ಲಾಡಳಿತದಿಂದ ಸರಕಾರಿ ಗೌರವ ಸಲ್ಲಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಸರ್ಕಾರದ ಪರವಾಗಿ ಗೌರವ ಅರ್ಪಿಸಿದರು. ಮಧ್ಯಾಹ್ನ 1ರಿಂದ ಸಂಜೆ 5 ಗಂಟೆಯ ತನಕ ಶಕ್ತಿನಗರದ ಕಲಾಂಗಣದಲ್ಲಿ ಸಾರ್ವಜನಿಕ ವೀಕ್ಷಣೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಕೊಂಕಣಿಯ ಪ್ರಸಿದ್ಧ ಗಾಯಕರು ತಮ್ಮ ಗಾಯನದಿಂದ ಸಂಗೀತ ನಮನ ಸಲ್ಲಿಸಿದರು. ಬಳಿಕ ಬೋಳೂರಿನಲ್ಲಿ ಅಂತಿಮ ಸಂಸ್ಕಾರ ನೆರವೇರಿತು.




























ಅಂತಿಮ ನಮನ ಸಲ್ಲಿಸಿದವರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, MLC ಐವನ್ ಡಿಸೋಜ, MLC ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್. ಲೋಬೊ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್., AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ತೆಲಿನೊ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿ ಪಿಂಟೋ, ಸಂಗೀತ ನಿರ್ದೇಶಕ ಗುರುಕಿರಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮತ್ತಿತರರು ಸೇರಿದ್ದರು.
















“ಕೊಂಕಣಿ ಭಾಷೆ, ಗೀತೆ ಮತ್ತು ಸಾಹಿತ್ಯದ ಮೂಲಕ ಲಕ್ಷಾಂತರ ಹೃದಯಗಳಿಗೆ ಸಂತೋಷ, ನೆಮ್ಮದಿ ಮತ್ತು ಪ್ರೇರಣೆ ನೀಡಿದ ಒಝಾರಿಯೊರವರ ಅಗಲಿಕೆ ಕೊಂಕಣಿ ಮಾತನಾಡುವ ಜನರಿಗಷ್ಟೇ ಅಲ್ಲ, ಇಡೀ ಕರ್ನಾಟಕದ ಜನತೆಗೆ ತುಂಬಲಾಗದ ನಷ್ಟವಾಗಿದೆ” ಎಂದು ಸಚಿವ ದಿನೇಶ್ ಗುಂಡೂರಾವ್ ಶ್ರದ್ಧಾಂಜಲಿ ಸಲ್ಲಿಸಿದರು. ಕೊಂಕಣಿ ಸಂಸ್ಕೃತಿಯ ಬೆಳಕಾಗಿ, ಜನಮನಗಳಲ್ಲಿ ಶಾಶ್ವತವಾಗಿ ಉಳಿಯುವಂತೆ ತಮ್ಮ ಬದುಕನ್ನು ಅರ್ಪಿಸಿದ ಎರಿಕ್ ಒಝಾರಿಯೊ ಅವರ ನೆನಪುಗಳು ಸದಾ ಜೀವಂತವಾಗಿವೆ ಎಂದು MLC ಐವನ್ ಡಿಸೋಜ ತಿಳಿಸಿದರು.




