ವಿಮಾನ ಪ್ರಯಾಣಿಕರ ಚಿನ್ನಾಭರಣ ಕಳವು – ವಿಮಾನ ನಿಲ್ದಾಣ ನೌಕರರ ದಂಧೆ ಬಯಲು
ಕಳವು ಮಾಡಿದ ಚಿನ್ನಾಭರಣ ಮತ್ತು ನಗದು ವಶ – 5 ಮಂದಿ ಆರೋಪಿಗಳ ಬಂಧನ





ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಕಳವು ಘಟನೆ ಬಯಲಾಗಿದ್ದು, ಮಹಿಳಾ ಪ್ರಯಾಣಿಕರೊಬ್ಬರು ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲಕ ಮಂಗಳೂರು ಬಂದು ಬ್ಯಾಗೇಜ್ ಪಡೆದುಕೊಂಡಾಗ ತಮ್ಮ ಚಿನ್ನಾಭರಣ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಪ್ರಯಾಣಿಕರು ತಕ್ಷಣವೇ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅ.ಕ್ರ 157/2025, ಕಲಂ 303(2) ಬಿ.ಎನ್.ಎಸ್. ಅಡಿಯಲ್ಲಿ ಕಳವು ಪ್ರಕರಣ ದಾಖಲಿಸಲಾಗಿದೆ.


ಬಂಧಿತರ ವಿವರ ಇಂತಿದೆ: ನಿತಿನ್ (ಕಂದಾವರ), ಸದಾನಂದ (ಮೂಡುಪೆರಾರು), ರಾಜೇಶ್ (ಮೂಡುಪೆರಾರು), ಪ್ರವೀಣ್ ಫೆರ್ನಾಂಡಿಸ್ (ಬಜಪೆ). ಇವರು AIR INDIA SATS ಕಂಪನಿಯಲ್ಲಿ ಲೋಡರ್/ಅನ್‌ಲೋಡರ್‌ಗಳಾಗಿ ಸುಮಾರು 9 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ವಿಚಾರಣೆ ವೇಳೆ 30-08-2025 ರಂದು ಮಹಿಳಾ ಪ್ರಯಾಣಿಕರ ಲಗೇಜ್‌ನಿಂದ 56 ಗ್ರಾಂ ಚಿನ್ನಾಭರಣ (ಸುಮಾರು ₹4.5 ಲಕ್ಷ ಮೌಲ್ಯ) ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಅವರು ಕಳವು ಮಾಡಿದ ಚಿನ್ನವನ್ನು ಮೂಡುಪೆರಾರದ ರವಿರಾಜ್ ಎಂಬಾತನಿಗೆ ಮಾರಾಟ ಮಾಡಿದ್ದು, ಅವನನ್ನು ಸಹ 317(2) ಬಿ.ಎನ್.ಎಸ್. ಅಡಿಯಲ್ಲಿ ಬಂಧಿಸಲಾಗಿದೆ. ಪೊಲೀಸರು ₹5 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಗಟ್ಟಿ ವಶಪಡಿಸಿ ಕೊಂಡಿದ್ದಾರೆ.

ಹಿಂದಿನ ಕಳವು ಪ್ರಕರಣ
ತನಿಖೆಯಲ್ಲಿ ಇದೇ ಆರೋಪಿಗಳು 2025ರ ಜನವರಿಯಲ್ಲಿ ಪ್ರಯಾಣಿಕ ಮನೋಹರ್ ಶೆಟ್ಟಿ ಅವರ ಬ್ಯಾಗಿನಿಂದ ₹2 ಲಕ್ಷ ನಗದು ಕಳವು ಮಾಡಿದ್ದ ಪ್ರಕರಣದಲ್ಲೂ ತೊಡಗಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. 2 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.(ಅ.ಕ್ರ 27/2025). ಪೊಲೀಸರು ಎಲ್ಲಾ 5 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗೆ ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕಂಡಬಂದಿರುವುದೆನೆಂದರೆ, ವಿಮಾನದ ಪ್ರಾಯಾಣಿಕರು ಬೆಲೆ ಬಾಳುವ ವಸ್ತುಗಳಾದ ಚಿನ್ನ, ನಗದನ್ನು ಬ್ಯಾಗೇಜ್ ನಲ್ಲಿ ಕಳುಹಿಸುವಾಗ ಸದ್ರಿ ಆರೋಪಿಗಳು ಬ್ಯಾಗ್ ತೆರೆದಿದ್ದಲ್ಲಿ ಹುಡುಕುವುದು. ಕೆಲವೊಮ್ಮೆ ಬ್ಯಾಗ್ ಲಾಕ್ ನ ಸುಲಭ ಪಾಸ್ ವಾರ್ಡ್ ಸಂಖ್ಯೆಗಳಿದ್ದಲ್ಲಿ ಪ್ರಯತ್ನಿಸಿ ಕಳವು ಮಾಡುತ್ತಿರುವುದು ಕಂಡು ಬರುತ್ತದೆ. ಪ್ರಯಾಣಿಕರು ಈ ರೀತಿ ನಿರ್ಲಕ್ಷ್ಯತೋರದೇ, ಜಾಗೃತೆಯಿಂದ ಇರಬೇಕಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೋರಿದ್ದಾರೆ.




