November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವ್ಯಕ್ತಿಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ ಮತ್ತು ಅತೀವ ಮಹತ್ವದ್ದಾದದ್ದು – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಕಥೊಲಿಕ ಶಿಕ್ಷಣ ಮಂಡಳಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾನ್ವಿತರಿಗೆ ಸನ್ಮಾನ

ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಷ್ಠತೆ ಮತ್ತು ಶಿಕ್ಷಕರ ಸಮರ್ಪಿತ ಸೇವೆಯನ್ನು ಗೌರವಿಸಲು, ಕಥೊಲಿಕ ಶಿಕ್ಷಣ ಮಂಡಳಿ (CBE) ಇಂದು ಸೆಪ್ಟೆಂಬರ್ 3ರಂದು ಬುಧವಾರ ಬಜ್ಪೆ ಶಾಂತಿ ಕಿರಣ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಕ್ಷೇತ್ರದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಕಥೊಲಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶಕರಾದ ಡಾ. ಸಿಪ್ರಿಯನ್ ಮೊಂತೇರೊರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

2024-2025 ರ ಶೈಕ್ಷಣಿಕ ವರ್ಷದಲ್ಲಿ SSLC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 21 ವಿದ್ಯಾರ್ಥಿಗಳು ಮತ್ತು PUC ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಏಳು ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ 2023-2024 ರ ಸಾಲಿನ ಐದು ಸ್ನಾತಕ ಮತ್ತು ಮೂರು ಸ್ನಾತಕೋತ್ತರ ಪದವಿ ವಿಭಾಗದ ವಿಶ್ವವಿದ್ಯಾನಿಲಯ ರ‍್ಯಾಂಕ್ ವಿಜೇತರನ್ನು ಕೂಡ ಗೌರವಿಸಲಾಯಿತು.

ಅಧ್ಯಕ್ಷೀಯ ಭಾಷಣದಲ್ಲಿ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಶಿಕ್ಷಣ ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳಿದರು. “ವ್ಯಕ್ತಿಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ ಮತ್ತು ಅತೀವ ಮಹತ್ವದ್ದಾಗಿದೆ. ಶಿಕ್ಷಕರ ಸಮರ್ಪಿತ ಸೇವೆಯು ವಿದ್ಯಾರ್ಥಿಗಳು ಸಮಾಜ ಮತ್ತು ರಾಷ್ಟ್ರಕ್ಕೆ ಮಹತ್ವದ ಕೊಡುಗೆಗಳನ್ನು ನೀಡಲು ಹಾಗೂ ‘ವಿಶ್ವ ಮಾನವ’ರಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ. ಶಿಕ್ಷಕರು ಮೌಲ್ಯಗಳು, ಸಂಸ್ಕೃತಿ ಮತ್ತು ಶಿಸ್ತಿನ ಆಧಾರ, ಮಾನವ ಗೌರವವನ್ನು ಪೋಷಿಸಿ, ವ್ಯಕ್ತಿಯನ್ನು ನಾಗರಿಕ ವ್ಯಕ್ತಿಯನ್ನಾಗಿ ರೂಪಿಸುತ್ತಾರೆ. ಶಿಕ್ಷಣವು ಜಾತಿ ಮತ್ತು ಧರ್ಮದ ತಡೆಗಳನ್ನು ಮೀರಿದ ಒಂದು ಸಾಧನವಾಗಿದ್ದು, ಸೌಹಾರ್ದತೆ, ಮಾನವ ಘನತೆ, ಸತ್ಯ, ನ್ಯಾಯ, ಸ್ವಾಭಿಮಾನ ಮತ್ತು ವಿಮರ್ಶಾತ್ಮಕ ಚಿಂತನೆಯ ವಿಶಾಲ ದಿಗಂತವನ್ನು ತೆರೆಯುತ್ತದೆ. ಕಥೊಲಿಕ್ ಶಿಕ್ಷಣ ಮಂಡಳಿಯು ಈ ಸಮಗ್ರ ಶಿಕ್ಷಣವನ್ನು ನೀಡಲು ಸಮರ್ಪಿತವಾಗಿದೆ. ನಮ್ಮ ಸಂಸ್ಥೆಗಳು ಕೇವಲ ಶೈಕ್ಷಣಿಕ ಶ್ರೇಷ್ಠತೆಯಷ್ಟೇ ಅಲ್ಲದೆ, ಮೌಲ್ಯಗಳ ಬಲವಾದ ಅಡಿಪಾಯವನ್ನು ಪೋಷಿಸಲು ಬದ್ಧವಾಗಿವೆ. ಇಂದು ನಾವು ಆಚರಿಸುತ್ತಿರುವ ಈ ಯಶಸ್ಸು, ನಮ್ಮ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ನಮ್ಮ ಶಿಕ್ಷಕರ ಅಚಲ ಸಮರ್ಪಣೆ ಮತ್ತು ಪೋಷಕರ ನಿರಂತರ ಬೆಂಬಲಕ್ಕೆ ಸಾಕ್ಷಿಯಾಗಿದೆ. ಬದುಕನ್ನು ಪರಿವರ್ತಿಸುವ ಶಿಕ್ಷಕರಿಗೂ ಮತ್ತು ನಮ್ಮ ಹೆಮ್ಮೆಯನ್ನು ಹೆಚ್ಚಿಸುವ ವಿದ್ಯಾರ್ಥಿಗಳಿಗೂ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸಿಪ್ರಿಯನ್ ಮೊಂತೆರೊರವರು ಮಾತನಾಡುತ್ತಾ, ಜಿಲ್ಲೆಯ ಶಾಲೆಗಳು ನೀಡುತ್ತಿರುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ತಂತ್ರಜ್ಞಾನದ ಪ್ರಗತಿ ಮತ್ತು ಆಧುನಿಕ ಪೀಳಿಗೆಯ ಸವಾಲುಗಳನ್ನು ಎದುರಿಸುತ್ತಿರುವ ಶಿಕ್ಷಕರ ಸವಾಲುಗಳನ್ನು ಅವರು ಗುರುತಿಸಿದರು. “ನಮ್ಮ ಶಾಲೆಗಳು ಮತ್ತು ಶಿಕ್ಷಕರು ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿದ್ದಾರೆ ಮತ್ತು ಅವರ ಸಮರ್ಪಣೆ ನಿಜಕ್ಕೂ ಶ್ಲಾಘನೀಯ. ಇಲ್ಲಿ ನೀಡುವ ಶಿಕ್ಷಣವು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗಿಲ್ಲ; ಇದು ವ್ಯಕ್ತಿತ್ವವನ್ನು ನಿರ್ಮಿಸುವುದು ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯೊಂದಿಗೆ ಈ ಸವಾಲುಗಳನ್ನು ಎದುರಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ. ಶಿಕ್ಷಕರ ದಿನಾಚರಣೆಯು ಒಂದು ಪವಿತ್ರ ಸಂಬಂಧದ ಸಂಭ್ರಮವಾಗಿದೆ ಮತ್ತು ಶಿಕ್ಷಕರು ನಿಜಕ್ಕೂ ಪರಿವರ್ತನೆಯ ವೀರರು. ಅವರೇ ವಿದ್ಯಾರ್ಥಿಗಳನ್ನು ತಮ್ಮದೇ ಕಾಲದ ವೀರರನ್ನಾಗಿ ರೂಪಿಸುವವರು” ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಹಲವು ಸಾಧಕರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಬೋಂದೆಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪದವಿ ಸಹಾಯಕಿ ಶರಲ್ ಶಾಂತಿ ಪಿಂಟೋರವರಿಗೆ ಕರ್ನಾಟಕ ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದಿಂದ 2024ನೇ ಸಾಲಿನ ‘ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಫರ್ಲಾ ಸೈಂಟ್ ಜೇಕಬ್ ಹೈಯರ್ ಪ್ರೈಮರಿ ಶಾಲೆಯ ಸಹಾಯಕ ಶಿಕ್ಷಕ ವೈ.ಎಫ್. ಕಲ್ವಾಡರವರು ತಾಲ್ಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದರು. ಪದುವಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ. ರೋಷನ್ ವಿನ್ಸಿ ಸಂತುಮಾಯೋರ್ ರವರಿಗೆ ‘ವಿಝಡಮ್ ಇನ್ಸ್ಟಿಟ್ಯೂಷನ್ಸ್ ನೆಟ್ವರ್ಕ್’ನಿಂದ ‘ಸಾಮಾಜಿಕ ಪ್ರಭಾವಿ ವ್ಯಕ್ತಿತ್ವ ಪ್ರಶಸ್ತಿ’ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ‘ಅತ್ಯುತ್ತಮ ರೆಡ್ ಕ್ರಾಸ್ ಯುವ ಅಧಿಕಾರಿ’ ಎಂದು ಮಾನ್ಯತೆ ನೀಡಿ ಗೌರವಿಸಲಾಯಿತು. ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊರವರು 2024ರಲ್ಲಿ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಗೌರವಿಸಲಾಯಿತು. ಕುಮಾರಿ ರೆಮೋನಾ ಇವೆಟ್ ಪಿರೇರಾರವರು 170 ಗಂಟೆಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿರುವುದಕ್ಕಾಗಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಆಥಿತಿ ಡಾ. ಸಿಪ್ರಿಯನ್ ಮೊಂತೇರೊ, ಪ್ರಾಥಮಿಕ ಶಿಕ್ಷಣ ನಿರ್ದೇಶಕರು, ಬೆಂಗಳೂರು ಅವರನ್ನು ಕೂಡ ಗೌರವಿಸಲಾಯಿತು. ಇದರ ಜೊತೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 100ರಷ್ಟು ಉತ್ತೀರ್ಣ ಫಲಿತಾಂಶ ಗಳಿಸಿದ ಸಿಬಿಇಯ 28 ಶಾಲೆಗಳನ್ನು ಕೂಡ ಗೌರವಿಸಲಾಯಿತು. ನಿವೃತ್ತ ಶಿಕ್ಷಕರು ಮತ್ತು ಇತರೆ ಸಾಧನೆ ಮಾಡಿದ ಶಿಕ್ಷಕರನ್ನು ಕೂಡ ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರಲ್ಲಿ, ಸುಳ್ಯದ ಸೈಂಟ್ ಬ್ರಿಜಿಟ್ ಹೈಯರ್ ಪ್ರೈಮರಿ ಶಾಲೆಯ ಶಿಕ್ಷಕಿ ವಲ್ಸಾ ಮತ್ತು ಮಂಗಳೂರಿನ ಮಿಲಾಗ್ರಿಸ್ ಹೈಸ್ಕೂಲಿನ ಶಿಕ್ಷಕಿ ಬ್ಯೂಲಾ ಎಂ. ರೇಗೊ ರವರು, ತಮ್ಮ ಸೇವೆ ಮತ್ತು ಶಿಕ್ಷಕ ವೃತ್ತಿಯ ಬಗ್ಗೆ ಕೃತಜ್ಞತೆ ಮತ್ತು ಸಂತೋಷದ ಭಾವನೆಗಳನ್ನು ಹಂಚಿಕೊಂಡರು.

ಕಥೊಲಿಕ ಶಿಕ್ಷಣ ಮಂಡಳಿ (CBE) ಕಾರ್ಯದರ್ಶಿ ವಂದನೀಯ ಡಾ. ಪ್ರವೀಣ್ ಲಿಯೊ ಲಸ್ರಾದೊ ಸ್ವಾಗತ ಭಾಷಣ ಮಾಡಿದರು. ಕಡಬ ಸೈಂಟ್ ಆ್ಯನ್ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕ ವಂದನೀಯ ಫಾದರ್ ಸುನಿಲ್ ಪಿಂಟೊರವರು ವಂದನಾರ್ಪಣೆ ಗೈದರು. ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ ಶಿಕ್ಷಕರಿಗೆ ಲೊರೆಟ್ಟೊ ಸೆಂಟ್ರಲ್ ಶಾಲೆಯ ವಂದನೀಯ ಫಾದರ್ ಜೇಸನ್ ಮೋನಿಸ್ ರವರು ಪ್ರಾರ್ಥನೆ ಸಲ್ಲಿಸಿ ಮೌನ ಆಚರಿಸಲಾಯಿತು. ವ್ಯವಸ್ಥಿತವಾಗಿ ರೂಪಿಸಿದ ಕಾರ್ಯಕ್ರಮದಲ್ಲಿ ಕಿನ್ನಿಗೋಳಿಯ ಸೈಂಟ್ ಮೇರಿಸ್ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆ, ಬೋಂದೆಲ್ ಸೈಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಗೀತೆ ಮತ್ತು ಶಿಕ್ಷಣ ಹಾಗೂ ಕೃತಜ್ಞತೆಯ ಮಹತ್ವವನ್ನು ಎತ್ತಿಹಿಡಿದ ಭಾಷಣಗಳನ್ನು ಒಳಗೊಂಡಿತ್ತು. ಬಂಟ್ವಾಳದ ಇನ್ಫೆಂಟ್ ಜೀಸಸ್ ಹೈಯರ್ ಪ್ರೈಮರಿ ಶಾಲೆಯ ಟೀಝಾ ಡಿಮೆಲ್ಲೊ ಮತ್ತು ಸುನಿಲ್ ಲೂಯಿಸ್ ರವರು ಕಾರ್ಯಕ್ರಮ ನಿರೂಪಿಸಿದರು. ಈ ಸಮಾರಂಭವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆಗಳನ್ನು ಆಚರಿಸಿದ್ದಲ್ಲದೆ, ಕರಾವಳಿ ನಗರದಲ್ಲಿ ಶ್ರೇಷ್ಠತೆಯ ಸಂಸ್ಕೃತಿಯನ್ನು ಬೆಳೆಸುವ ಕಥೊಲಿಕ ಶಿಕ್ಷಣ ಮಂಡಳಿಯ ಅಮೂಲ್ಯ ಪರಂಪರೆಯನ್ನು ಪುನರುಚ್ಚರಿಸಿತು.

You may also like

News

ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ

ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ ಮಾಣಿ
News

ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್  ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು

You cannot copy content of this page