ಅಂತಾರಾಷ್ಟ್ರೀಯ ರೋಟರಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪ್ರದಾನ
ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಭವಿಷ್ಯದ ಪ್ರಜೆಗಳನ್ನು ರೂಪಿಸಿದ ಮಾಣಿ ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿಯವರಿಗೆ ದೊರೆತ ಪ್ರಶಸ್ತಿ

“ಶಿಕ್ಷಕರು ನಿಸ್ವಾರ್ಥ ಸೇವಾ ಮನೋಭಾವ ಮತ್ತು ಶ್ರದ್ಧೆಯಿಂದ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಧಾರೆ ಎರೆದು ಭವಿಷ್ಯದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಶ್ರೇಷ್ಠ ಜವಾಬ್ದಾರಿಯನ್ನು ಹೊಂದಿದ್ದಾರೆ” ಎಂದು ರೋಟರಿ ಮಾಜಿ ಜಿಲ್ಲಾ ಸಹಾಯಕ ಗವರ್ನರ್ ಡಾ. ರಂಜನ್ ಹೇಳಿದರು. ಅವರು ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತಾ ಯೋಜನೆ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆಪ್ಟೆಂಬರ್ 4ರಂದು ಗುರುವಾರದಂದು ನಗರದಲ್ಲಿರುವ ಆಫೀಸರ್ಸ್ ಕ್ಲಬ್‌ನಲ್ಲಿ ಜರುಗಿದ ಅಂತಾರಾಷ್ಟ್ರೀಯ ರೋಟರಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಉದಯ ಕುಮಾರ್ ಮತ್ತು ಮಾಣಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ, ನೀಡಿದ ಗಮನಾರ್ಹ ಕೊಡುಗೆ ಹಾಗೂ ಸಾಧಿಸಿದ ಅಮೂಲ್ಯ ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದ ಚಂದ್ರಾವತಿ ಟೀಚರ್
ಅಂತಾರಾಷ್ಟ್ರೀಯ ರೋಟರಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪಡೆದ ಚಂದ್ರಾವತಿ ಟೀಚರ್ ರವರು ತಮ್ಮ ಬೋಧನೆಯಲ್ಲಿ ಯಾವತ್ತೂ ವಿದ್ಯಾರ್ಥಿಗಳನ್ನು ಹೊಡೆದು ಪಾಠ ಕಲಿಸದ ವಿಶಿಷ್ಟ ಗುಣವನ್ನು ಹೊಂದಿದ್ದಾರೆ. ಬದಲಾಗಿ ವಿದ್ಯಾರ್ಥಿಗಳ ಹೆತ್ತವರು ಹಾಗೂ ಊರಿನ ಎಲ್ಲರೊಂದಿಗೆ ಮಮತೆಯಿಂದ ಮತ್ತು ಸಹಕಾರದಿಂದ ವರ್ತಿಸುವ ಮೂಲಕ ನೈಜವಾಗಿ ಪ್ರಶಸ್ತಿಗೆ ಯೋಗ್ಯರಾಗಿದ್ದಾರೆ.
“ನಗುನಗುತ್ತಾ ಪಾಠ ಮಾಡುವ ಅವರ ವಿಧಾನದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಪಾಠವು ಚೆನ್ನಾಗಿ ಅರ್ಥವಾಗುತ್ತದೆ. ಅವರ ಬೋಧನಾ ಶೈಲಿ ನಿಜವಾಗಿಯೂ ಪ್ರೇರಣಾದಾಯಕ” ಎಂದು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ವೃತ್ತಿಪರ ಸೇವಾ ನಿರ್ದೇಶಕರಾದ ನಿತಿನ್ ಪ್ರಶಂಸಿಸಿದರು.

ಚಂದ್ರಾವತಿ ಟೀಚರ್‌ರವರ ನಿಸ್ವಾರ್ಥ ಸೇವೆಯ ವಿಶೇಷತೆಗಳು:
1 ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಶಿಕ್ಷಣ ಸೇವೆಗೆ ಅರ್ಪಿಸಿಕೊಂಡಿದ್ದಾರೆ.
2 ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತನ್ನ ಮಗುವಿನಂತೆ ಕಾಣುವ ಅಭಿಮಾನವನ್ನು ತೋರಿದ್ದಾರೆ.
3 ಬಡ ಹಾಗೂ ಹಿಂದುಳಿದ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಲು ಶ್ರಮಿಸಿದ್ದಾರೆ.
4 ಶಾಲೆಯ ಅಭಿವೃದ್ಧಿ ಮತ್ತು ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಶ್ರಮವನ್ನು ಹೂಡಿದ್ದಾರೆ.
5 ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಾವತಿ ಟೀಚರ್, “ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜಸೇವಾ ಮನೋಭಾವವನ್ನು ಕೊಂಡಾಡಿ, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ. ಇದೊಂದು ಬಯಸದೆ ಬಂದ ಭಾಗ್ಯ” ಎಂದು ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷೆ ಸಜ್ಞಾ ಭಾಸ್ಕರ್ ಸ್ವಾಗತಿಸಿ, ಪ್ರಶಸ್ತಿಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಕೋಮು ಸೌಹಾರ್ದತೆ ಸಾರುವ ಓಣಂ ಹಬ್ಬವನ್ನು ಇದೇ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವೇದಿಕೆಯಲ್ಲಿ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ವೃತ್ತಿಪರ ಸೇವಾ ನಿರ್ದೇಶಕರಾದ ನಿತಿನ್, ಸಂಸ್ಥೆಯ ದಂಡಾಧಿಕಾರಿ ಸರಿತಾ ಡಿಸೋಜ ಉಪಸ್ಥಿತರಿದ್ದರು. ಕಾರ್ಯದರ್ಶಿ ಪದ್ಮನಾಭ ನಾಯಕ್ ವಂದಿಸಿದರು.




