ಮಾಹಿತಿ ಹಕ್ಕು ಕಾಯ್ದೆಗೆ ಸರ್ಕಾರವನ್ನೇ ಬುಡಮೇಲು ಮಾಡುವ ಶಕ್ತಿ ಇದೆ – ಮಾಹಿತಿ ಆಯುಕ್ತ ಬದ್ರುದ್ದೀನ್ ಕೆ. ಮಾಣಿ
ಮಾಹಿತಿ ನೀಡದಿದ್ದಲ್ಲಿ 25 ಸಾವಿರ ರೂಪಾಯಿ ದಂಡ ವಿಧಿಸಲು ಶಿಫಾರಸು

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಗಾರ ಹಾಗೂ ಅಧಿಕಾರಿಗಳೊಂದಿಗಿನ ಸಂವಾದದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 274, ಕಂದಾಯ ಇಲಾಖೆಯ 194, ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 64, ಪೋಲಿಸ್ ಇಲಾಖೆಗೆ ಸಂಬಂಧಿಸಿದ 40 ಅರ್ಜಿಗಳು ಸೇರಿ ಒಟ್ಟಾರೆಯಾಗಿ ಜಿಲ್ಲೆಯಲ್ಲಿ 707 ಅರ್ಜಿಗಳು ದ್ವಿತೀಯ ಮೇಲ್ಮನವಿ ಪ್ರಾಧಿಕಾರವಾದ ಮಾಹಿತಿ ಆಯೋಗದಲ್ಲಿ ಬಾಕಿ ಉಳಿದಿವೆ. ಮೇಲ್ಮನವಿ ವಿಚಾರಣೆಗೆ ಸ್ವೀಕೃತವಾಗುವ ಕ್ರಮಾಂಕದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ 21ನೇ ಸ್ಥಾನದಲ್ಲಿದ್ದು ಶೇಕಡಾ 67ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದೆ. ಅವುಗಳನ್ನು ಶೂನ್ಯ ಸ್ಥಾನಕ್ಕೆ ತರಲು ಜಿಲ್ಲೆಯ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.

ನಾವು ಆಯುಕ್ತರಾಗಿ ಅಧಿಕಾರ ಸ್ವೀಕರಿಸುವ ಅವಧಿಯಲ್ಲಿ ಮಾಹಿತಿ ಹಕ್ಕು ಆಯೋಗದಲ್ಲಿ 52 ಸಾವಿರ ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿದ್ದವು, ಕಳೆದ ಏಳು ತಿಂಗಳಲ್ಲಿ ವಿಚಾರಣೆ ನಡೆಸಿದ ಪರಿಣಾಮ ನಿನ್ನೆಯವರೆಗೆ 42,327 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಕೆಲವೊಂದು ಅರ್ಜಿಗಳು 2015ರಿಂದಲೂ ಇತ್ಯರ್ಥಕ್ಕೆ ಬಾಕಿ ಉಳಿದಿದ್ದು, ಅವುಗಳ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದರು.


ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಹುದಾದ ನಿಕೃಷ್ಟ ಕಾಯಿದೆಯಲ್ಲ ಇದು. ಅತ್ಯಂತ ಬಲಶಾಲಿಯಾದ ಕಾಯ್ದೆ. ಈ ಕಾಯ್ದೆಯ ಪರಿಣಾಮಗಳು ಹಾಗೂ ಬದಲಾವಣೆಗಳು ಸಮಾಜದಲ್ಲಿ ಕಂಡುಬಂದಿವೆ. ಜಿಲ್ಲೆಯ ನಿವೃತ್ತ ಅಧಿಕಾರಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸ್ವೀಕೃತಗೊಂಡಾಗ ಅಧಿಕಾರಿಗಳು ತಾಯಿಯ ಸ್ಥಾನದಲ್ಲಿರಬೇಕು. ಅರ್ಜಿ ಬಂದ ಕೂಡಲೇ ಸಮಸ್ಯೆ ಇದೆ ಎಂದು ಉಡಾಫೆ ಮಾಡಬಾರದು. ನಿಗದಿ ಪಡಿಸಿದ ಅವಧಿಯಲ್ಲಿ ಮಾಹಿತಿದಾರನಿಗೆ ಲಭ್ಯವಿರುವ ಮಾಹಿತಿ ನೀಡಬೇಕು, ತಪ್ಪಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ 25 ಸಾವಿರ ರೂಪಾಯಿವರೆಗೆ ದಂಡವಿಧಿಸುವುದರೊಂದಿಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.




