ಮೊಂತಿ ಹಬ್ಬ- ಮೇರಿ ಮಾತೆಯ ಜನ್ಮ ದಿನವು ಕುಟುಂಬ ಏಕತೆಗೆ ಸಂತಸ-ಸಡಗರದ ಹಬ್ಬ
ಸೃಷ್ಟಿ ಸಂರಕ್ಷಣೆಗೆ ಕರೆ ನೀಡಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಇಂದು ಸೆಪ್ಟೆಂಬರ್ 8ರಂದು ಸೋಮವಾರ ಆಚರಿಸಲ್ಪಡುವ ಮೇರಿ ಮಾತೆಯ ಜನನದ ಹಬ್ಬದ ಅಂಗವಾಗಿ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ವಿಶೇಷ ಸಂದೇಶ ನೀಡಿದ್ದಾರೆ. ”ಈ ದಿನ ಪುಟಾಣಿ ಮಕ್ಕಳು ಹೂವುಗಳನ್ನು ತಂದು, ಹೊಲಗದ್ದೆಗಳಲ್ಲಿ ಬೆಳೆದ ಹೊಸ ಬೆಳೆಯನ್ನು ದೇವರಿಗೆ ಅರ್ಪಿಸುತ್ತಾರೆ. ಹೊಸ ಬೆಳೆ, ಮೇರಿ ಮಾತೆಯ ಜನ್ಮ ದಿನ ಮತ್ತು ನಮ್ಮ ಮನೆಗಳ ಹೆಣ್ಣು ಮಕ್ಕಳು – ಈ ಮೂವರ ಆರೈಕೆ ಮಾಡುವುದು ದೇವರಿಂದ ಬಂದಿರುವ ವಿಶೇಷ ಆಹ್ವಾನವಾಗಿದೆ” ಎಂದು ಬಿಷಪ್ ತಿಳಿಸಿದ್ದಾರೆ.
“ಮಾತೆಯ ಜನ್ಮ ದಿನಾಚರಣೆಗೆ ನಾವು ನೀಡುವ ಗೌರವವು ನಮಗೆ ಮರಳಿ ಲಭಿಸುತ್ತದೆ. ಕುಟುಂಬದ ಹೆಣ್ಣು ಮಕ್ಕಳು ನಿಜವಾಗಿಯೂ ನಮ್ಮ ಕುಟುಂಬದ ಭಂಡಾರವಾಗಿದ್ದಾರೆ.” ಎಂದರು.

ಬಿಷಪ್ ತಮ್ಮ ಸಂದೇಶದಲ್ಲಿ “ಸೆಪ್ಟೆಂಬರ್ 1ರಿಂದ ಅಕ್ಟೋಬರ್ 4 ಸಂತ ಫ್ರಾನ್ಸಿಸ್ ಆಸಿಸಿ ಹಬ್ಬದ ತನಕ ಕಥೊಲಿಕ್ ಧರ್ಮ ಸಭೆಯು ‘ಸೃಷ್ಟಿಯ ಕಾಲ’ ವನ್ನು ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ ಮೇರಿ ಮಾತೆಯ ಜನ್ಮ ದಿನಾಚರಣೆ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಹೊಸ ಬೆಳೆಗೆ, ಹೆಣ್ಣು ಮಕ್ಕಳಿಗೆ ಮತ್ತು ಕುಟುಂಬದ ಏಕತೆಗೆ ಹೆಚ್ಚಿನ ಮಹತ್ವ ನೀಡುತ್ತದೆ.
“ಸೃಷ್ಟಿಯ ಸಂರಕ್ಷಣೆಗಾಗಿ ಪ್ರಾರ್ಥಿಸೋಣ, ಪರಸ್ಪರ ಸೇವೆ ಮಾಡೋಣ, ಪ್ರೀತಿಯಿಂದ ಸೃಷ್ಟಿಯನ್ನು ಉಳಿಸೋಣ ಮತ್ತು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸೋಣ” ಎಂದು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಕರೆ ನೀಡಿದರು.




