ರಾಜ್ಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿಗೆ ಸಹಕಾರ ನೀಡಿ, ಅಭಿವೃದ್ಧಿಗೆ ಕೈಜೋಡಿಸಿ – MLC ಐವನ್ ಡಿಸೋಜ ಮನವಿ
ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿ

ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಕಾರ್ಯ 2025 ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರ ತನಕ ನಡೆಯಲಿದ್ದು, ಇದಕ್ಕೆ ಸಮಾಜದ ಎಲ್ಲಾ ಜನರೂ ಸಹಕಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರು ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿಯಲು ಈ ಗಣತಿ ಕಾರ್ಯ ನಡೆಯುತ್ತಿದೆ. ಸರಕಾರದ ಅನುದಾನವನ್ನು ಸಮಾಜದ ಎಲ್ಲ ಜನರಿಗೆ ಸಮರ್ಪಕವಾಗಿ ಹಂಚುವುದು ಇದರ ಉದ್ದೇಶ.


ಈ ಗಣತಿ ಮೂಲಕ ಸಮಾಜದ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ಹಿಂದುಳಿದಿರುವ ಪ್ರದೇಶಗಳನ್ನು ಸರಕಾರ ಗುರುತಿಸಿ ಸೂಕ್ತ ಯೋಜನೆಗಳನ್ನು ರೂಪಿಸಬಹುದು. ಜನರ ನೈಜ ಆರ್ಥಿಕ ಸ್ಥಿತಿ ತಿಳಿದು ಬರುವುದರಿಂದ ಸರಿಯಾದ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬಹುದು. ಸಮಗ್ರ ಮಾಹಿತಿ ಸಿಕ್ಕರೆ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಇದು ದಾರಿಯಾಗಲಿದೆ.


ಇದರಲ್ಲಿ ಎಲ್ಲರೂ ಭಾಗವಹಿಸಬೇಕು. ಸಂಘ ಸಂಸ್ಥೆಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸಮೀಕ್ಷೆಯ ಪ್ರಶ್ನಾವಳಿಯಲ್ಲಿ 60 ಪ್ರಶ್ನೆಗಳಿದ್ದು, ಎಲ್ಲಾ ವಿಚಾರಗಳನ್ನು ಇದು ಒಳಗೊಂಡಿರುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇದು ಸರಕಾರವೇ ನಡೆಸುತ್ತಿರುವ ಸಮೀಕ್ಷೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಪ್ಯಾನಿ ಅಲ್ವಾರಿಸ್, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಸಿಟಿ ವಲಯ ಅಧ್ಯಕ್ಷ ಅರುಣ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.




