‘Karavali_tigers’ ಪ್ರಚೋದನಕಾರಿ ಸಂದೇಶ ಪ್ರಕರಣ – ತಮಿಳುನಾಡಲ್ಲಿ ಆರೋಪಿತ ಬಂಧನ
ಸಾಮಾಜಿಕ ಜಾಲತಾಣದಲ್ಲಿ ‘Karavali_tigers’ ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪಿತನನ್ನು ಮಂಗಳೂರು ನಗರ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯವರು ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಿಲ್ಲೂರು ಮನೆ, ಮಾಲವಂತಿಗೆ ಎಂಬಲ್ಲಿನ 22 ವರ್ಷ ಪ್ರಾಯದ ಮೊಹಮ್ಮದ್ ಕೈಫ್ ಎಂದು ಗುರುತಿಸಲಾಗಿದೆ. ಇದೇ ಜುಲೈ 19ರಂದು ಮಂಗಳೂರು ನಗರದಲ್ಲಿ ಆರೋಪಿತನು ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದ ವಿಷಯ ದಾಖಲಾಗಿ ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.


ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು, ಆರೋಪಿತನು ತಮಿಳುನಾಡಿನಲ್ಲಿ ಅಡಗಿರುವುದನ್ನು ಪತ್ತೆ ಮಾಡಿ, ಅಲ್ಲಿಗೆ ತೆರಳಿ ವಶಕ್ಕೆ ಪಡೆದು ಮಂಗಳೂರಿಗೆ ತರಲಾಯಿತು. ಬಳಿಕ ಆರೋಪಿತನನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ಪೇಜ್ ವಿರುದ್ಧ ಮಂಗಳೂರು ಬಜ್ಪೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



ಪೊಲೀಸರ ಎಚ್ಚರಿಕೆ: ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು, ಪ್ರಚೋದನಕಾರಿ ಅಥವಾ ಕಾನೂನುಬಾಹಿರ ಸಂದೇಶಗಳನ್ನು ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಕೃತ್ಯಗಳು ಕಾನೂನುಪ್ರಕಾರ ಗಂಭೀರ ಅಪರಾಧವಾಗಿದ್ದು, ಭವಿಷ್ಯದಲ್ಲಿ ಯಾರೂ ಈ ರೀತಿಯ ಕೃತ್ಯಕ್ಕೆ ಕೈ ಹಾಕಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.




