ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಂಗಳೂರಿನ ಶಿಕ್ಷಕಿ ಐರಿನ್ ಲೀನಾ ಸಿಕ್ವೇರಾ
ದಕ್ಷಿಣ ಕನ್ನಡ ಜಿಲ್ಲೆಯ ಕಥೋಲಿಕ್ ವಿದ್ಯಾ ಮಂಡಳಿಯ ಆಡಳಿತಕ್ಕೊಳಪಟ್ಟ ನಂತೂರು ಕೆಲ್ವರಿ ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಐರಿನ್ ಲೀನಾ ಸಿಕ್ವೇರಾರವರು 2025-26ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘ, ಬೆಂಗಳೂರು ವತಿಯಿಂದ ನೀಡಲಾಯಿತು.







ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರುನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾದ ಗೌರವಾನ್ವಿತ ರುದ್ರಪ್ಪ ಲಮಾಣಿ, ಸ್ಥಳೀಯ ಶಾಸಕರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಸಾವಿರಾರು ಶಿಕ್ಷಕರ ಸಮ್ಮುಖದಲ್ಲಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸಚಿವೆ ಸನ್ಮಾನ್ಯ ಮಧು ಬಂಗಾರಪ್ಪರವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕಿಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಲಾಯಿತು.




ಐರಿನ್ ಲೀನಾ ಸಿಕ್ವೇರಾರವರು ಹಲವು ವರ್ಷಗಳಿಂದ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲು-ರಾತ್ರಿ ಶ್ರಮಿಸಿ ಸೇವೆ ಸಲ್ಲಿಸಿದ್ದಾರೆ. ಮಕ್ಕಳಲ್ಲಿ ಶಿಸ್ತಿನ ಬೆಳವಣಿಗೆ, ಸಾಂಸ್ಕೃತಿಕ ಚಟುವಟಿಕೆಗಳ ಉತ್ತೇಜನ, ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವುದರಲ್ಲಿ ಇವರ ಪಾತ್ರ ಮಹತ್ತರವಾಗಿದೆ. ತಮ್ಮ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸಿ, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು “ಶಿಕ್ಷಕರು ಕೇವಲ ಪಾಠ ಹೇಳುವವನು ಮಾತ್ರವಲ್ಲ, ಸಮಾಜ ನಿರ್ಮಾಣದಲ್ಲಿ ಪ್ರಮುಖ ಹಾದಿದೀಪ” ಎಂಬ ನಂಬಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಅನೇಕ ಪೋಷಕರ ಹಾಗೂ ವಿದ್ಯಾರ್ಥಿಗಳಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಕದ್ರಿ ಕೈಬಟ್ಟಲು ನಿವಾಸಿಯಾದ ಇವರು ಫರ್ನ್ಸ್ ಸರ್ವಿಸ್ ಸಂಸ್ಥೆಯ ಮಾಲಕರಾದ ಟೈಟಸ್ ಫೆರ್ನಾಂಡಿಸ್ ರವರ ಧರ್ಮಪತ್ನಿಯಾಗಿರುತ್ತಾರೆ.




