November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ಇಪ್ಪತ್ತೇಳನೇ ವರ್ಷದ ಭಜನಾ ಕಮ್ಮಟ – ಸಮಾರೋಪ ಸಮಾರಂಭ

ಭಜನಾ ಕಮ್ಮಟದಿಂದ ಧರ್ಮ, ಸಂಸ್ಕೃತಿಯ ಅನಾವರಣ, ಭಗವಂತನ ಸಾಕ್ಷಾತ್ಕಾರ – ಒಡಿಯೂರು ಗುರುದೇವಾನಂದ ಸ್ವಾಮೀಜಿ

ಭಜನಾ ಕಮ್ಮಟದಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಅನಾವರಣವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಸೆಪ್ಟೆಂಬರ್ 21ರಂದು ಭಾನುವಾರ ಧರ್ಮಸ್ಥಳದಲ್ಲಿ 27ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಜನೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು ದೃಢಭಕ್ತಿಯಿಂದ ಭಜನೆ ಮಾಡಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು. ಭಜನೆ ಮೂಲಕ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳನ್ನು ಸಾಧಿಸಬಹುದು. ಇಂದು “ಆನ್‌ಲೈನ್’’ ಚಿಂತೆ-ಚಿಂತನದಿಂದ “ಲೈಫ್‌ಲೈನ್’’ ಹಾಳಾಗುತ್ತಿದೆ ಎಂದು ಅವರು ವಿಷಾದಿಸಿದರು.

ರಾಮಾಯಣ, ಮಹಾಭಾರತದ ಕಥೆಗಳಿಂದ ನಮ್ಮ ಸಾರ್ಥಕ ಬದುಕಿಗೆ ಮಾರ್ಗದರ್ಶನ ಸಿಗುತ್ತಿದೆ. ಭಜನಾ ಕಮ್ಮಟದ ಮೂಲಕ ಹೆಗ್ಗಡೆಯವರು ಹಿಂದೂ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಸ್ವಾಮೀಜಿ ಅಭಿನಂದಿಸಿದರು. ಭಜನೆಯಿಂದ ಸಾತ್ವಿಕ ಶಕ್ತಿ ಜಾಗೃತಗೊಂಡು ಭಯ, ದ್ವೇಷ ದೂರವಾಗಿ ಪ್ರೀತಿ-ವಿಶ್ವಾಸ ಮೂಡಿ ಬಂದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ ಧರ್ಮ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಸನಾತನ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನದೊಂದಿಗೆ ಏಕತೆ ಮತ್ತು ಏಕಾಗ್ರತೆ ಸಾಧಿಸಲು ಭಜನೆ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಶುಭಾಶಂಸನೆ ಮಾಡಿ, ಧರ್ಮಸ್ಥಳದಲ್ಲಿ ಶ್ರದ್ಧಾ-ಭಕ್ತಿಯ ಪವಿತ್ರ ವಾತಾವರಣ ನಮ್ಮ ಅನುಭವಕ್ಕೆ ಬರುತ್ತದೆ. ಪ್ರತಿಯೊಂದು ಮನೆಯಲ್ಲಿಯೂ ವಾರಕ್ಕೊಂದು ದಿನವಾದರೂ ಭಜನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಭಜನೆಯಿಂದ ಮನೆ, ಸಮಾಜ ಹಾಗೂ ಎಲ್ಲಾ ಕಡೆ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಅವರು ಹೇಳಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಕೂಡಾ ಭಜನೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಸಂತೋಷವಾಗಿದೆ. ಭಜನಾ ಪಟುಗಳು ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕುಂದಾಪುರದ ಕೃಷ್ಣ ಪೂಜಾರಿ ಮತ್ತು ನೆಲ್ಯಾಡಿಯ ಕುಮಾರಿ ಭವಿಷ್ಯ ಕಮ್ಮಟದ ಬಗ್ಯೆ ಅನಿಸಿಕೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರ ಪಡಿಸಿದರು.
ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಚಂದ್ರಶೇಖರ ಸಾಲ್ಯಾನ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

You may also like

News

ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ

ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ ಮಾಣಿ
News

ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್  ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು

You cannot copy content of this page