ಅಂತರ್ ಧಾರ್ಮಿಕ ಸಾಮರಸ್ಯಕ್ಕಾಗಿ ಮಂಗಳೂರಿನಲ್ಲಿ ‘ಬಂಧುತ್ವ’ ಕಾರ್ಯಕ್ರಮ
ಸಮಾಜ ಸೇವೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬದುಕಿಸಿದವರಿಗೆ ಸನ್ಮಾನ

AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರ ನೇತೃತ್ವದಲ್ಲಿ 71ನೇ ವಾರ್ಷಿಕ ಮಹಾಸಭೆ

ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್, ಸಂದೇಶ ಫೌಂಡೇಶನ್ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ‘ಬಂಧುತ್ವ – Compassion Beyond Boundaries: The Spirit of Mother Teresa in Interreligious Harmony’ ಎಂಬ ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 19ರಂದು ಶುಕ್ರವಾರ ಬಜ್ಜೋಡಿ ಶಾಂತಿ ಕಿರಣ ಸಭಾಂಗಣದಲ್ಲಿ ಜರುಗಿತು.



















ಕರ್ನಾಟಕ ವಿಧಾನಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡುಗೈ ದಾನಿ ಮೈಕಲ್ ಡಿಸೋಜ, ವಕೀಲ ಎಂ. ಪಿ. ನೊರೊನ್ಹಾ, ಮಿಲಾಗ್ರಿಸ್ ಬ್ಯಾಂಕಿನ ಅಧ್ಯಕ್ಷ ಜಾರ್ಜ್ ಫೆರ್ನಾಂಡಿಸ್, ಭರತನಾಟ್ಯ ರಾಣಿ ರೆಮೋನಾ ಪಿರೇರಾ, MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಪ್ರಸ್ತುತ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಾವ್ಲ್ ರೊಲ್ಫಿ ಡಿಕೊಸ್ತಾ ಇವರೆಲ್ಲರನ್ನು ಸಮುದಾಯಕ್ಕಾಗಿ ನೀಡಿದ ದೇಣಿಗೆಗಾಗಿ ಈ ಸಂದರ್ಭದಲ್ಲಿ “ಸಮುದಾಯ ಸೇವಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
















ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರು “ಸಮಾಜ ಸೇವೆ ಮಾಡಿದಾಗಲೇ ಜೀವನದ ನಿಜವಾದ ಅರ್ಥ ಸಿಗುತ್ತದೆ. ಇತರರ ಹಿತಾಸಕ್ತಿ ನೋಡಿದಾಗ ನಮ್ಮ ಮನಸ್ಸಿಗೆ ನಿಜವಾದ ಸಂತೋಷ ದೊರಕುತ್ತದೆ. ಹಣ ಸಂಪಾದನೆ ತಾತ್ಕಾಲಿಕ, ಆದರೆ ಸೇವೆಯ ನೆನಪು ಶಾಶ್ವತ. ಸಣ್ಣ ಸಹಾಯ ಮಾಡಿದರೂ ಅದು ಯಾರಾದರೊಬ್ಬರ ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಹುದು. ಸೇವೆಗೆ ಪ್ರತಿಫಲವನ್ನು ನಿರೀಕ್ಷಿಸದೆ ಕೈಜೋಡಿಸಿದಾಗ ಸಮಾಜವು ಇನ್ನಷ್ಟು ಸುಂದರವಾಗುತ್ತದೆ. ಮಾನವನ ಧರ್ಮವೆಂದರೆ ಮತ್ತೊಬ್ಬನ ಕಷ್ಟದಲ್ಲಿ ಅವನ ಜೊತೆ ನಿಂತುಕೊಳ್ಳುವುದು. ಸೇವೆಯ ದಾರಿ ಕಷ್ಟಕರವಾದರೂ ಅದು ಜೀವನವನ್ನು ಬೆಳಗುವ ಮಾರ್ಗ. ನಮ್ಮ ಕಾರ್ಯಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬುದು ಪ್ರತಿಯೊಬ್ಬ ಸಮಾಜಸೇವಕರ ಆಶಯ” ಎಂದರು.






















ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ಮಾತನಾಡಿ, “ಸಮಾಜ ಸೇವೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬದುಕಿಸಿದ ನಿಮಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಸೇವಾ ಮನೋಭಾವ ಸಮಾಜಕ್ಕೆ ಮಾದರಿಯಾಗಿದೆ. ನಿಮ್ಮ ಶ್ರಮ ಮತ್ತು ತ್ಯಾಗ ಅನೇಕ ಜನರ ಬದುಕಿನಲ್ಲಿ ಬೆಳಕಿನ ಕಿರಣ ತಂದಿದೆ. ನೀವು ತೋರಿಸಿದ ದಾರಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಸಮಾಜ ಸೇವೆಯ ನಿಸ್ವಾರ್ಥ ಮನೋಭಾವವೇ ನಿಜವಾದ ಪೂಜೆ ಎಂಬುದನ್ನು ನಿಮ್ಮ ಕೆಲಸ ಸಾಬೀತುಪಡಿಸಿದೆ. ಇಂತಹ ಸೇವಾ ಹೃದಯಗಳಿಗೆ ಸನ್ಮಾನ ಸಲ್ಲಿಸುವ ಅವಕಾಶ ನಮಗೆ ಸಿಕ್ಕಿದ್ದು ಹೆಮ್ಮೆಯ ಸಂಗತಿ” ಎಂದರು.








ಇದೇ ಸಂದರ್ಭದಲ್ಲಿ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ನೇತೃತ್ವದಲ್ಲಿ ಅಖಿಲ ಭಾರತೀಯ ಕ್ಯಾಥೋಲಿಕ್ ಯೂನಿಯನ್ ಇದರ 71ನೇ ವಾರ್ಷಿಕ ಸಾಮಾನ್ಯ ಮಹಾಸಭೆಯು ನಡೆಯಿತು. ರಾಜಕೀಯ ವಿಜ್ಞಾನ ವಿಭಾಗದ ಮಾಜಿ ಪ್ರಾಧ್ಯಾಪಕ ಪ್ರೊ. ರಾಜಾರಾಮ್ ತೋಲ್ಪಾಡಿ, ಖ್ಯಾತ ಕನ್ನಡ ಲೇಖಕಿ ಫಾತಿಮಾ ರಾಲಿಯಾರವರು ಅತಿಥಿ ವಕ್ತಾರರಾಗಿ ಭಾಗವಹಿಸಿದರು. ಕೀರ್ತಿ ಪ್ರೀತಿ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.




