ಪರಿಶ್ರಮ ಮತ್ತು ಆಸಕ್ತಿಯಿಂದ ರಾಷ್ಟ್ರಮಟ್ಟ ತಲುಪಿದ ಪುತ್ತೂರಿನ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು
ರಾಷ್ಟ್ರ ವೇದಿಕೆಗೆ ಹೆಜ್ಜೆ ಇಟ್ಟ ಕಿಶೋರ ಪ್ರತಿಭೆಗಳಾದ ಮಂದಿರಾ ಕಜೆ ಹಾಗೂ ಸಾತ್ವಿಕ್ ಜಿ.


ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು, ವಿದ್ಯಾಭಾರತಿ ಅಖಿಲ ಭಾರತೀಯ ಸಂಸ್ಥಾನವು ಹೈದರಾಬಾದ್‌ನಲ್ಲಿ ಏರ್ಪಡಿಸಿದ್ದ ರೋನಲ್ ಹಂತದ ಗಣಿತ-ವಿಜ್ಞಾನ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಿಶೋರ ವರ್ಗದ ಗಣಿತ ಮಾದರಿ ಪ್ರದರ್ಶನದಲ್ಲಿ ಗಿರೀಶ ಗೌಡ ಹಾಗೂ ಸುಮಿತ್ರಾ ದಂಪತಿಗಳ ಪುತ್ರ 9ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಜಿ. ಪ್ರಥಮ ಸ್ಥಾನವನ್ನು ಗಳಿಸಿದ್ದಾನೆ. ಕಿಶೋರ ವರ್ಗದ ವಿಜ್ಞಾನ ಪತ್ರ ವಾಚನ ಸ್ಪರ್ಧೆಯಲ್ಲಿ ಖ್ಯಾತ ವಕೀಲರಾದ ಮಹೇಶ್ ಕಜೆ ಹಾಗೂ ದೀಪಿಕಾ ಕಜೆ ದಂಪತಿಯ ಹಿರಿಯ ಪುತ್ರಿ, 10ನೇ ತರಗತಿ ವಿದ್ಯಾರ್ಥಿನಿ ಮಂದಿರಾ ಕಜೆ ಪ್ರಥಮ ಸ್ಥಾನವನ್ನು ಗಳಿಸಿದ್ದಾಳೆ.
ಇಬ್ಬರು ವಿದ್ಯಾರ್ಥಿಗಳು ನಿರಂತರ ಪರಿಶ್ರಮ, ಗಾಢ ಆಸಕ್ತಿ ಮತ್ತು ಅಚಲ ತವಕದಿಂದ ಅಭ್ಯಾಸ ನಡೆಸಿ ಈ ಮಟ್ಟಕ್ಕೆ ತಲುಪಿದ್ದಾರೆ. ದಿನನಿತ್ಯ ಶ್ರದ್ಧೆಯಿಂದ ಕಲಿತುಕೊಂಡು, ತಮಗೆ ಬಂದ ಸವಾಲುಗಳನ್ನು ಉತ್ಸಾಹದಿಂದ ಸ್ವೀಕರಿಸಿದುದೇ ಇವರ ಯಶಸ್ಸಿಗೆ ಮೂಲವಾಗಿದೆ. ಪಾಠಪುಸ್ತಕಗಳಾಚೆಗೆ ಜ್ಞಾನವನ್ನು ಸಂಪಾದಿಸುವ ದಕ್ಷತೆ ಇವರಲ್ಲಿ ಬೆಳೆದಿದೆ. ಸಮಯವನ್ನು ಸದುಪಯೋಗಪಡಿಸಿಕೊಂಡು ಕಠಿಣ ಪರಿಶ್ರಮ ಪಡದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಇವರ ತವಕ, ತ್ಯಾಗ ಹಾಗೂ ದೃಢ ಮನೋಬಲ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

ರಾಷ್ಟ್ರಮಟ್ಟದ ಗಣಿತ ಮಾದರಿ ಸ್ಪರ್ಧೆ ಪಂಜಾಬಿನ ಸರ್ವಹಿತ ಕಾರ್ಯ ಕೇಶವ ವಿದ್ಯಾನಿಕೇತನ ವಿದ್ಯಾಧಾಮ ಜಲಂಧರದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದ ವಿಜ್ಞಾನ ಪತ್ರವಾಚನ ಸ್ಪರ್ಧೆ ಉತ್ತರ ಪ್ರದೇಶದ ಮೀರತ್‌ನ ಬಾಲೆ ರಾಮ ಬ್ರಿಜ್ ಭೂಷಣ್ ಸರಸ್ವತಿ ಶಿಶುಮಂದಿರದಲ್ಲಿ ನಡೆಯಲಿದೆ.
ಇವರಿಬ್ಬರೂ ಮುಂದಿನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿ ಎಂಬುದು ಸರ್ವರ ಹಾರೈಕೆಯಾಗಿದೆ.




