ಮಲ್ಪೆಯಲ್ಲಿ ಬೆಚ್ಚಿಬೀಳಿಸುವ ಘಟನೆ – AKMS ಬಸ್ ಮಾಲೀಕ, ಉದ್ಯಮಿ ಸೈಫುದ್ದೀನ್ ಬರ್ಬರ ಹತ್ಯೆ
ಮಲ್ಪೆ-ಕೊಡವೂರು ರಸ್ತೆ ಸಮೀಪದ ಮನೆಯೊಂದರಲ್ಲಿ ಸೆಪ್ಟೆಂಬರ್ 27ರಂದು ಶನಿವಾರ ಬೆಳಿಗ್ಗೆ ಸಂಭವಿಸಿದ ಬೆಚ್ಚಿಬೀಳಿಸುವ ಘಟನೆಯಲ್ಲಿ AKMS ಬಸ್ ಮಾಲೀಕರಾಗಿದ್ದ ಹಾಗೂ ಸಾರಿಗೆ ಉದ್ಯಮಿ ಸೈಫುದ್ದೀನ್ (ಆತ್ರಾಡಿ)ಯವರನ್ನು ಮೂವರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.


ಕೊಡವೂರಿನ ಸಾಲ್ಮರ ಪ್ರದೇಶದಲ್ಲಿರುವ ಹೊಸ ಮನೆಯಲ್ಲಿ ಒಬ್ಬರೇ ಇದ್ದ ಸೈಫುದ್ದೀನ್ ಮೇಲೆ ದುಷ್ಕರ್ಮಿಗಳು ಏಕಕಾಲದಲ್ಲಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಇರಿದು ಹಾಗೂ ಗುಂಡು ಹಾರಿಸಿ ಕೊಲೆಗೈದಿದ್ದಾರೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ನಂತರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, DYSP ಪ್ರಭು ಡಿ.ಟಿ. ಹಾಗೂ ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.



ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೃತ್ಯವನ್ನು AKMS ಖಾಸಗಿ ಬಸ್ ಸಂಸ್ಥೆಯಲ್ಲಿ ಚಾಲಕರಾಗಿದ್ದ ಮೂವರು ಆರೋಪಿಗಳು ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸೈಫುದ್ದೀನ್ ವಿರುದ್ಧ ಉಡುಪಿ ಮತ್ತು ಮಲ್ಪೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿದ್ದು, ಅವರು ರೌಡಿ ಶೀಟರ್ ಆಗಿದ್ದರು. ಇದಲ್ಲದೆ, ಎರಡು ಕೊಲೆ ಪ್ರಕರಣಗಳಲ್ಲಿ ನೇರ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ 10ರಿಂದ 11ರ ನಡುವೆ ನಡೆದ ಈ ದಾಳಿಯಲ್ಲಿ ಆರೋಪಿ ಮೂವರು ಚಾಕು ಮತ್ತು ತಲವಾರಿನಿಂದ ದಾಳಿ ನಡೆಸಿ ದೇಹದ ಹಲವೆಡೆ ಇರಿದು ಗಾಯಗೊಳಿಸಿದ್ದು, ಬಳಿಕ ಗುಂಡೇಟು ಹಾರಿಸಿದ್ದಾರೆಂಬ ಮಾಹಿತಿ ಇದೆ. ಕೊಲೆಗೈದ ಆರೋಪಿಗಳ ನಿಖರ ಕಾರಣ ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.





