ಮಂಗಳೂರಿನಲ್ಲಿ ಸಂತ ತೆರೇಸಾ ಆಫ್ ಲಿಸ್ಯೂ ಶತಮಾನೋತ್ಸವ ಭಕ್ತಿಪೂರ್ಣ ಆಚರಣೆ
ಮಂಗಳೂರಿನ ಕಂಕನಾಡಿ ಸೆಕ್ರೆಡ್ ಹಾರ್ಟ್ಸ್ ಮೋನೆಸ್ಟ್ರಿಯ ಕ್ಲೋಸ್ಟರ್ಡ್ ಕಾರ್ಮೆಲ್ ಸಹೋದರಿಯರು, ಸಂತ ತೆರೇಸಾ ಆಫ್ ಲಿಸ್ಯೂರವರ ಪವಿತ್ರತೆಯ ಶತಮಾನೋತ್ಸವವನ್ನು ಭಕ್ತಿಪೂರ್ಣ ಉತ್ಸವದೊಂದಿಗೆ ಆಚರಿಸಿದರು. ಆಚರಣೆಯ ಭಾಗವಾಗಿ, ಸಂತ ತೆರೇಸಾ ಲಿಸ್ಯೂ ಅವರ ಜೀವನದ ಮೇಲೆ ವಸ್ತು ಪ್ರದರ್ಶನವನ್ನು ಮೋನೆಸ್ಟ್ರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಮುಂದುವರಿಕೆಯಾಗಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರವರೆಗೆ ಪ್ರಾರ್ಥನೆಗಳನ್ನು ಪ್ರತಿದಿನ ಬೆಳಿಗ್ಗೆಯಿಂದ ಸಂಜೆವರೆಗೆ ನಡೆಸಲಾಗುವುದು.




ಉದ್ಘಾಟನಾ ಕಾರ್ಯಕ್ರಮವು ಭಾನುವಾರ, ಸೆಪ್ಟೆಂಬರ್ 28ರಂದು ಸಂಜೆ 3:45ಕ್ಕೆ ನೆರವೇರಿತು. ಗೋಲ್ಡನ್ ಬುಕ್ ರೆಕಾರ್ಡ್ ಸಾಧಕಿ ಕುಮಾರಿ ರೇಮೊನಾ ಪಿರೇರಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಶೀರ್ವಾದವನ್ನು ಸಂತ ಜೋಸೆಫ್ ಮೋನೆಸ್ಟ್ರಿಯ ಸೂಪಿರಿಯರ್ ವಂದನೀಯ ಫಾದರ್ ಮೆಲ್ವಿನ್ ಡಿಕುನ್ಹಾ OCD ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬೆಥನಿ ಮೇಳದ ಮುಖ್ಯಸ್ಥೆ ಸೂಪಿರಿಯರ್ ಜನರಲ್ ಧರ್ಮ ಭಗಿನಿ ವಂದನೀಯ ರೋಸ್ ಸೆಲಿನ್ ಬಿ.ಎಸ್. ಉಪಸ್ಥಿತರಿದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ – ಸಂತ ತೆರೇಸಾರವರ ಜೀವನವು ಸರಳತೆಯಲ್ಲಿಯೇ ಪವಿತ್ರತೆಯನ್ನು ಹುಡುಕುವ ಪಾಠ ನೀಡುತ್ತದೆ. ಅವರ ಆತ್ಮಸಾಕ್ಷಾತ್ಕಾರದ ದಾರಿಯು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಇಂದಿನ ಯುವಕರು ಸಂತ ತೆರೇಸಾ ಅವರ ಧೈರ್ಯ, ಶ್ರದ್ಧೆ ಮತ್ತು ಪ್ರೀತಿ ತ್ಯಾಗಗಳಿಂದ ಪಾಠ ಕಲಿಯಬೇಕು. ಸಣ್ಣ ಸಣ್ಣ ಕಾರ್ಯಗಳಲ್ಲೂ ದೇವರ ಪ್ರೀತಿ ತೋರುವುದೇ ಅವರ ಸಂದೇಶ. ಅವರ ಶತಮಾನೋತ್ಸವವು ನಾವುಲ್ಲರಿಗೂ ನಿಜವಾದ ಆಧ್ಯಾತ್ಮಿಕ ನವ ಚೈತನ್ಯವನ್ನು ತುಂಬುತ್ತದೆ.” ಎಂದರು.









ಈ ಸಂದರ್ಭದಲ್ಲಿ ವಂದನೀಯ ಫಾದರ್ ರೂಡೋಲ್ಪ್ ವಿ. ಡಿಸೋಜರವರ “ಕ್ರೂಸಿಬಲ್ ಆಫ್ ಸಫರಿಂಗ್ಸ್ – ಎ ಪಾಥ್ ಟು ಪರ್ಫೆಕ್ಟ್ ಲವ್, ಸೆಂಟ್ ಥೆರೀಸ್ ಆಫ್ ಲಿಸ್ಯೂ ಅನುಸಾರ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪುಸ್ತಕವು ಭಕ್ತರಿಗೆ ಆತ್ಮಶೋಧನೆಗೆ ದಾರಿ ತೋರುವ ಕೃತಿಯಾಗಿದೆ ಎಂದು ಹೇಳಿದರು.






ಮುಖ್ಯ ಅತಿಥಿಗಳಾಗಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಇದರ ಕೇಂದ್ರೀಯ ಮಾಜಿ ಅಧ್ಯಕ್ಷ ರೋಲ್ಪಿ ಡಿಕೊಸ್ತಾ, ಮಾಧ್ಯಮ ಸಂಯೋಜನಕಾರ ಎಲಿಯಾಸ್ ಫೆರ್ನಾಂಡಿಸ್, ಟ್ರಾಫಿಕ್ ವಾರ್ಡನ್ ಹಾಗೂ ಸಮಾಜ ಸೇವಕರಾದ ಮಾಕ್ಸಿಮ್ ಮೊರಸ್, ಕಾರ್ಮೆಲ್ ಸಭೆಯ ಪರವಾಗಿ ಭಗಿನಿ ಜೆಸಿಂತಾ ಡಿಕೊಸ್ತ, ಪುಸ್ತಕ ಪ್ರತಿನಿಧಿಯಾಗಿ ವಿಕ್ಟರ್ ಡಿಸೋಜ, ಹಾಗೂ ಕಾರ್ಯಕ್ರಮದ ಸಂಚಾಲಕರಾದ ಸ್ಟ್ಯಾನ್ಲಿ ಬಂಟ್ವಾಳ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಿಯಾ ನೊರೊನ್ಹಾ ನಿರೂಪಿಸಿದರು.



ಸಂತ ತೆರೇಸಾರವರ ವಾರ್ಷಿಕೋತ್ಸವದ ದಿನವಾದ ಅಕ್ಟೋಬರ್ 1ರಂದು ವಂದನೀಯ ಫಾದರ್ ಜೇಮ್ಸ್ ಪಿಯೂಸ್ ಡಿಸೋಜರವರು ಬಲಿ ಪೂಜೆಯನ್ನು ಅರ್ಪಿಸಲಿದ್ದಾರೆ. ಪೂರ್ವಸಿದ್ಧತೆಯಾಗಿ ಸೆಪ್ಟೆಂಬರ್ 28ರಿಂದ 30ರವರೆಗೆ ಪರಮ ಪ್ರಸಾದದ ಆರಾಧನೆ ಮತ್ತು ಬಲಿ ಪೂಜೆಯನ್ನು ವಂದನೀಯ ಫಾದರ್ ಪ್ರಣಾಮ್ ರವರು ನೆರವೇರಿಸಲಿದ್ದಾರೆ.

ಕ್ಲೋಸ್ಟರ್ಡ್ ಕಾರ್ಮೆಲ್ ಸಹೋದರಿಯರು ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರನ್ನು ಈ ದಿವ್ಯತೆಯಿಂದ ತುಂಬಿದ ಆಚರಣೆ ಮತ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಹಾರೈಸಿದ್ದಾರೆ. “ದಿ ಲಿಟಲ್ ಫ್ಲವರ್” ಎಂದೆ ಪರಿಚಿತವಾಗಿರುವ ಸಂತ ತೆರೇಸಾ ಆಫ್ ಲಿಸ್ಯೂ ಅವರ ಜೀವನ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಅರಿಯಲು ಇದು ಒಂದು ಸುವರ್ಣಾವಕಾಶವಾಗಿದೆ.





