ಮೊಗರ್ನಾಡ್ ಚರ್ಚ್‌ನ 250ನೇ ಜುಬಿಲಿ ಅಂಗವಾಗಿ ಚರ್ಚ್ ವ್ಯಾಪ್ತಿಯಲ್ಲಿ ಕುಟುಂಬ ಮಹೋತ್ಸವ ಆಚರಣೆ
ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಮೊಗರ್ನಾಡ್‌ನ ದೇವ ಮಾತಾ ಚರ್ಚ್ ಇದರ 250ನೇ ಜುಬಿಲಿ ಅಂಗವಾಗಿ ಸೆಪ್ಟೆಂಬರ್ 28ರಂದು ಆದಿತ್ಯವಾರ ಪಾಲಕರ ಕುಟುಂಬ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಮೊಗರ್ನಾಡ್ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಪಾಲಕರನ್ನು ಒಗ್ಗೂಡಿಸಿರುವುದೇ ಸಂಭ್ರಮವನ್ನು ಹೆಚ್ಚಿಸಿತು. ಬೆಳಿಗ್ಗೆ 8:00 ಗಂಟೆಯ ದಿವ್ಯ ಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಪವಿತ್ರ ಆರಾಧನೆಯೊಂದಿಗೆ ಮುಂದುವರೆಯಿತು.



ಮಂಗಳೂರಿನ ಬಜ್ಜೋಡಿ ಪಾಸ್ಟೋರಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾದ ವಂದನೀಯ ಫಾದರ್ ಸಂತೋಷ್ ರೊಡ್ರಿಗಸ್ ರವರು ಪವಿತ್ರ ಪೂಜೆಯನ್ನು ನೆರವೇರಿಸಿದರು. ಅವರೊಂದಿಗೆ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕ್ಯಾನ್ಯುಟ್ ಡಿಮೆಲ್ಲೊ ಹಾಗೂ ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೋರವರು ದಿವ್ಯ ಬಲಿಪೂಜೆಯಲ್ಲಿ ಉಪಸ್ಥಿತರಿದ್ದರು.






ತಮ್ಮ ಪ್ರವಚನದಲ್ಲಿ ಫಾದರ್ ರೊಡ್ರಿಗಸ್ ರವರು ಕುಟುಂಬದ ಮಹತ್ವದ ಬಗ್ಗೆ ಮಾತನಾಡಿದರು. ಪರಸ್ಪರ ಸಂವಹನ, ಪ್ರಾರ್ಥನೆ ಮತ್ತು ಕುಟುಂಬದೊಂದಿಗೆ ಊಟದ ಅಗತ್ಯವನ್ನು ಎತ್ತಿ ತೋರಿಸಿದರು. ಅಲ್ಲದೆ, ಪಾಲಕರು ತಮ್ಮ ಮಕ್ಕಳಿಗೆ ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡುವಂತೆ ಮತ್ತು ಅದರ ಅಪಾಯಗಳ ಬಗ್ಗೆ ಜಾಗೃತರಾಗಿರುವಂತೆ ಪ್ರೋತ್ಸಾಹಿಸಿದರು. ಸೇವೆ ಮಾಡಲು ಅತ್ಯುತ್ತಮ ಸ್ಥಳವೆಂದರೆ ಕುಟುಂಬ ಎಂದು ಅವರು ಒತ್ತಿ ಹೇಳಿದರು. ಪೂಜೆಯ ನಂತರ, ಎಲ್ಲಾ ಪಾಲಕರ ಕುಟುಂಬಗಳಿಗಾಗಿ ವಿಶೇಷ ಆರಾಧನೆಯನ್ನು ನಡೆಸಲಾಯಿತು.


ಈ ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯನಾ ಡಿಕುನ್ಹಾ, ಮದರ್ ಆಫ್ ಗಾಡ್ ಚರ್ಚ್ ಸುಪೀರಿಯರ್ ಸಿಸ್ಟರ್ ಆ್ಯನಿ, ಮಹೋತ್ಸವ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಹಾಗೂ ಮಹೋತ್ಸವ ಸಮಿತಿಯ ಸದಸ್ಯರು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




2000ನೇ ಇಸವಿಯ ನಂತರ ವಿವಾಹವಾದ ಮತ್ತು ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸಾಮೂಹಿಕ ಉಪಹಾರದೊಂದಿಗೆ ಈ ಭವ್ಯ ಕಾರ್ಯಕ್ರಮವು ಮುಕ್ತಾಯಗೊಂಡಿತು.




