February 12, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಕ್ಟೋಬರ್ 2ರಂದು ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ರಸ ಪ್ರಶ್ನೆ, ತರಬೇತಿ ಕಾರ್ಯಾಗಾರ‌ ಹಾಗೂ ಸನ್ಮಾನ ಕಾರ್ಯಕ್ರಮ

ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಅಕ್ಟೋಬರ್ 2ರಂದು ಬಿ.ಸಿ. ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಘಟಕಾದ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ತಿಳಿಸಿದರು.

ಮೆಲ್ಕಾರ್ ಗೋಲ್ಡನ್ ಸಿಟಿ ಕಾಂಪ್ಲೆಕ್ಸ್ ನ ಸಂಸ್ಥೆಯ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ನೂತನ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ವಿದ್ಯಾರ್ಥಿ ವೇತನ ವಿತರಿಸುವರು. ಅತಿಥಿಗಳಾಗಿ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ, ಸಂಸ್ಥೆಯ ಅಜೀವ ಸದಸ್ಯರಾದ ಆರಿಫ್ ಕೆ., ಬಿ.ಕೆ. ಅಬ್ದುಲ್ಲಾ ಕುಂಞಿ ಹಾಜಿ ಬೈರಿಕಟ್ಟೆ, ಝುಬೈರ್ ಬುಳೇರಿಕಟ್ಟೆ, ಮಂಗಳೂರು ಎ.ಜೆ. ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯರಾದ ಡಾ. ಹಸೀನಾ ಭಾಗವಹಿಸುವರು. ಉಪನ್ಯಾಸಕ ಹಾಗೂ ರಾಜ್ಯ ಮಟ್ಟದ ತರಬೇತುದಾರ ಅಬ್ದುಲ್ ರಝಾಕ್ ಅನಂತಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು ಎಂದರು.

ಸುಮಾರು 50 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಗಾಂಧೀ ಜಯಂತಿ ಪ್ರಯುಕ್ತ ಆಹ್ವಾನಿತ ವಿದ್ಯಾರ್ಥಿಗಳಿಗೆ ಗಾಂಧೀಜಿ ಬದುಕು ಆಧರಿಸಿದ ರಸ ಪ್ರಶ್ನೆ ಕಾರ್ಯಕ್ರಮ, ತರಬೇತಿ ಕಾರ್ಯಾಗಾರ‌, ಕೈಯಲ್ಲಿ ಪೂರ್ತಿ ಕುರ್ ಆನ್ ಬರೆದು ಸಾಧನೆ ಮಾಡಿರುವ ವಿದ್ಯಾರ್ಥಿನಿಯರಾದ ಸಜ್ಲ ಇಸ್ಮಾಯಿಲ್ ಹಾಗೂ ಫಾತಿಮತ್ ಅಬೀರ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಜಮೀಯ್ಯತುಲ್ ಫಲಾಹ್ ಸಂಸ್ಥೆಯು 1988ರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಕೇಂದ್ರೀಕರಿಸಿ ಮಂಗಳೂರಿನಲ್ಲಿ ಸ್ಥಾಪನೆಯಾದ ಜಿಲ್ಲೆಯ ಸಮಾಜ‌ ಸೇವಾ ಸಂಸ್ಥೆಯಾಗಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪ್ರತಿವರ್ಷ ಶೈಕ್ಷಣಿಕ ಪ್ರೇರಣೆ ನೀಡುತ್ತಾ ಬಂದಿದೆ. ಹೆಣ್ಣು ಮಕ್ಕಳ ಶಿಕ್ಷಣ ಜಾಗೃತಿ, ಶಾಲೆ ಬಿಟ್ಟ ಮಕ್ಕಳಿಗೆ ಮರಳಿ ಬಾ ಶಾಲೆಗೆ ಕಾರ್ಯಕ್ರಮ, ಸರ್ವ‌ ಶಿಕ್ಷಣ ಅಭಿಯಾನದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕಾರ, ವರದಕ್ಷಿಣೆ ವಿರುದ್ಧ ಜಾಗೃತಿ ಇವುಗಳು ಈ ಸಂಸ್ಥೆಯ ಪ್ರಮುಖ ಕಾರ್ಯಕ್ರಮಗಳು.

ಮಂಗಳೂರು ಕಂಕನಾಡಿ ಯಲ್ಲಿ ಸಂಸ್ಥೆಯ ಸುಸಜ್ಜಿತ ಕಛೇರಿ, ಸಮುದಾಯ ಭವನ, ವಿದ್ಯಾರ್ಥಿ ನಿಲಯ ಕಾರ್ಯಾಚರಿಸುತ್ತಿದೆ. ಉಳ್ಳಾಲ ತಾಲೂಕಿನ ಅಡ್ಕರೆಪಡ್ಪು ಎಂಬಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜನ್ನು ಸ್ಥಾಪಿಸಿ ನಡೆಸುತ್ತಾ ಬರುತ್ತಿದೆ. ಬಂಟ್ವಾಳ ತಾಲೂಕು ಘಟಕ ಕೂಡಾ 1988 ರಲ್ಲಿ ಸ್ಥಾಪನೆಯಾಗಿದ್ದು ನಿರಂತರ ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಾ, ನಿರಂತರವಾಗಿ ಪ್ರತಿವರ್ಷವೂ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದು ಕ್ರಿಯಾಶೀಲ ಘಟಕವಾಗಿ ಹೊರಹೊಮ್ಮಿದೆ. ಈ ಸಾಲಿನಲ್ಲಿ ಸ್ವಂತ ಸುಸಜ್ಜಿತ ಕಛೇರಿಯನ್ನು ಹೊಂದಿದೆ ಎಂದವರು ವಿವರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಪೂರ್ವಾದ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಕಾರ್ಯದರ್ಶಿ ಹಕೀಂ ಕಲಾಯಿ, ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಉಪಸ್ಥಿತರಿದ್ದರು.

You may also like

News

ಕಥೊಲಿಕ್ ಸಭಾ ಸುರತ್ಕಲ್ ವಲಯದ ದಶಮಾನೋತ್ಸವ ಸಂಭ್ರಮ

ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ – ವೆಲೆಂಟೈನ್ ಡಿಸೋಜ ನಿವೃತ್ತ DSP   ಸುರತ್ಕಲ್ ಇಲ್ಲಿನ ಸೆಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣದಲ್ಲಿ ಫೆಬ್ರವರಿ 8ರಂದು ಭಾನುವಾರ ಕಥೊಲಿಕ್
News

ಕಾಸರಗೋಡು ನಗರಸಭೆಯ 9ನೇ ವಾರ್ಡ್ ಸಭೆ ಯಶಸ್ವಿ

ಮಾದರಿ ನಗರಸಭೆ ನಿರ್ಮಾಣಕ್ಕೆ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಸಂಕಲ್ಪ ಕಾಸರಗೋಡು ನಗರಸಭೆಯ 2026–27ನೇ ವಾರ್ಷಿಕ ಯೋಜನೆ ರೂಪಿಕರಣದ ಅಂಗವಾಗಿ 9ನೇ ವಾರ್ಡ್‌ನ ನುಳ್ಳಿಪಾಡಿ (ಅಣಂಗೂರು, ಜೆ.ಪಿ.

You cannot copy content of this page