ಮರದ ಕೊಂಬೆ ಬಿದ್ದು ಯುವತಿ ಸಾವು – ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಎಂಟನೇ ಜೀವ ಬಲಿ
ವಾಹನ ಸವಾರರ ಹಾಗೂ ಸಾರ್ವಜನಿಕರ ಪ್ರಾಣ ಉಳಿಯಲು ಪ್ರತಿಭಟನೆಯೇ ಬೇಕೇ?
“ಮಂಗಳೂರಿನಲ್ಲಿ ಇಂತಹುದೇ ದುರಂತ ತಪ್ಪಿಸಿದ ಪ್ರತಿಷ್ಠಿತ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್‌ನ ವಿನೂತನ ಹೋರಾಟ”

ನಗರದ ಸೋಲದೇವನಹಳ್ಳಿ ಪ್ರದೇಶದಲ್ಲಿ ಸಂಭವಿಸಿದ ದಾರುಣ ಘಟನೆಯಲ್ಲಿ 24 ವರ್ಷದ ಕೀರ್ತನಾ ಎಂಬ ಯುವತಿ ಮೃತಪಟ್ಟಿದ್ದಾರೆ. ಹೆಬ್ಬಾಳ ಮೂಲದ ಕೀರ್ತನಾ ಹಾಗೂ ಆಕೆಯ ಸ್ನೇಹಿತೆ ಆಚಾರ್ಯ ಕಾಲೇಜಿನಲ್ಲಿ ನಡೆದ ಸ್ಯಾಂಡಲ್ ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನೋಡಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಅಪಾಯಕಾರಿಯಾಗಿ ವಾಲಿಕೊಂಡು ನಿಂತಿದ್ದ ಬೃಹತ್ ಗಾತ್ರದ ಮರದ ಕೊಂಬೆ ಅಚಾನಕ್ ಎರಡು ಬೈಕ್‌ಗಳ ಮೇಲೆ ಬಿದ್ದಿತು.
ಈ ವೇಳೆ ಕೀರ್ತನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕೆಯ ಸ್ನೇಹಿತೆ ಹಾಗೂ ಮತ್ತೊಂದು ಬೈಕ್‌ನಲ್ಲಿದ್ದ ಭಾಸ್ಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ನಿರ್ಲಕ್ಷ್ಯದ ಹೊಣೆ ಹೊತ್ತು ಬಿಬಿಎಂಪಿಯೇ ಕಾನೂನು ಕ್ರಮಕ್ಕೆ ಒಳಗಾಗಬೇಕು
ನಗರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, “ಅಪಾಯಕಾರಿ ಮರಗಳನ್ನು ಮುಂಚಿತವಾಗಿ ತೆರವುಗೊಳಿಸದಿದ್ದರೆ ಪಾದಚಾರಿಗಳು ಮತ್ತು ವಾಹನ ಸವಾರರ ಜೀವ ಯಾವಾಗ ಬೇಕಾದರೂ ಹಾಳಾಗಬಹುದು. ಬಿಬಿಎಂಪಿಯೇ ಈ ನಿರ್ಲಕ್ಷ್ಯದ ಹೊಣೆ ಹೊತ್ತು ಕಾನೂನು ಕ್ರಮಕ್ಕೆ ಒಳಗಾಗಬೇಕು” ಎಂದು ತಿಳಿಸಿದ್ದಾರೆ.
ಹೆಚ್ಚಿನ ಕಳವಳಕಾರಿ ಸಂಗತಿಯೆಂದರೆ, ಈ ಹಿಂದೆ ಬೆಂಗಳೂರಿನಲ್ಲೇ 7 ಜನರು ಮರ ಬೀಳುವುದರಿಂದ ಮೃತಪಟ್ಟಿದ್ದು, ಕೀರ್ತನಾರವರದು ಎಂಟನೇ ಪ್ರಾಣ ಬಲಿ ಎಂಬುದು ಸ್ಪಷ್ಟವಾಗಿದೆ.

“ಮಂಗಳೂರಿನಲ್ಲಿ ಇಂತಹುದೇ ದುರಂತ ತಪ್ಪಿಸಿದ ಜೆರಾರ್ಡ್ ಟವರ್ಸ್‌ನ ವಿನೂತನ ಹೋರಾಟ”

ಇದೇ ರೀತಿಯ ಘಟನೆ ಮಂಗಳೂರಿನಲ್ಲೂ ಸಂಭವಿಸುವ ಅಂಚಿನಲ್ಲಿತ್ತು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಿವಭಾಗ್ ಬಸ್ ಸ್ಟ್ಯಾಂಡ್ ಬಳಿ ಅಪಾಯಕಾರಿಯಾಗಿ ನಿಂತಿದ್ದ ಒಣ ಮರವನ್ನು ಸಾರ್ವಜನಿಕರು ಹಲವು ಬಾರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೆ ಪ್ರತಿಕ್ರಿಯೆ ಸಿಗದೆ, ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಜನವರಿ 28ರಂದು ವಿನೂತನ ಪ್ರತಿಭಟನೆ ನಡೆಸಿದ್ದರು.




“ಒಣಗಿದ ಮರ ಕಡಿಯಿರಿ – ಜನರ ಪ್ರಾಣ ರಕ್ಷಿಸಿ” ಎಂದು ಮಾಧ್ಯಮಗಳ ಮುಖಾಂತರ ಜಾಗೃತಿ ಮೂಡಿಸಿದ ಪರಿಣಾಮ, ಕೊನೆಗೆ ಫೆಬ್ರವರಿ 6ರಂದು ಮಂಗಳೂರು ಮಹಾನಗರ ಪಾಲಿಕೆಯವರು ಆ ಒಣ ಮರವನ್ನು ಕಡಿದು ಅಪಾಯ ನಿವಾರಿಸಿದರು. ಅನೇಕ ವಾಹನ ಸವಾರರ ಹಾಗೂ ಸಾರ್ವಜನಿಕರ ಪ್ರಾಣ ಉಳಿಯಲು ಈ ಪ್ರತಿಭಟನೆಯೇ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಜೆರಾರ್ಡ್ ಟವರ್ಸ್ ಈ ಪ್ರತಿಭಟನೆಯನ್ನು ಮಾಡಿರದಿದ್ದರೆ, ಮಂಗಳೂರಿನಲ್ಲಿಯೂ ಕೂಡಾ ಅನೇಕ ಜೀವಗಳು ಅಪಾಯಕ್ಕೆ ಸಿಲುಕುತ್ತಿದ್ದವು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.




