ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ
ಅಂಚೆ ಚೀಟಿ ಚಾರಿತ್ರಿಕ ಮಹತ್ವದ ದಾಖಲೆ – ಸುಧಾಕರ ಮಲ್ಯ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಅಂಚೆ ಇಲಾಖೆಯ ‘ಮೈ ಸ್ಟ್ಯಾಂಪ್’ ಯೋಜನೆಯಡಿ ಅಂಚೆ ಚೀಟಿಯ ಬಿಡುಗಡೆ ಇಂದು ಅಕ್ಟೋಬರ್ 6ರಂದು ಸೋಮವಾರ ಪತ್ರಿಕಾ ಭವನದಲ್ಲಿ ನಡೆಯಿತು.

ಭಾರತೀಯ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಸುಧಾಕರ್ ಮಲ್ಯರವರು ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಅಂಚೆ ಇಲಾಖೆ ವಿವಿಧ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಪತ್ರಕರ್ತರಿಗಾಗಿ ಅಪಘಾತ ವಿಮಾಯೋಜನೆ, ಆರೋಗ್ಯ ಸುರಕ್ಷಾ ವಿಮಾಯೋಜನೆಯ ಜೊತೆ ಅಂಚೆ ಸೇವೆಯಲ್ಲಿಯೂ ಸುಧಾರಿತ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ. ಮೈ ಸ್ಟ್ಯಾಂಪ್ ಮೂಲಕ ಚಾರಿತ್ರಿಕ ಮಹತ್ವದ ಘಟನೆಗಳ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಅಂಚೆ ಚೀಟಿ ಬಿಡುಗಡೆ ಮಾಡಲು ಅವಕಾಶ ನೀಡಿದೆ ಎಂದು ಅವರು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮಾತನಾಡಿ, ಭಾರತದ ಅಂಚೆ ಇಲಾಖೆಯು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಅಂಚೆ ವ್ಯವಸ್ಥೆಯಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಮುದ್ರೆ ಒತ್ತಿರುವುದು ಒಂದು ಮಹತ್ವದ ಮೈಲಿಗಲ್ಲು, ಅಂಚೆ ಚೀಟಿಯ ಬೆಲೆ 5 ರೂಪಾಯಿ ಆಗಿದ್ದರೂ ಇದರ ಮೌಲ್ಯ 500 ರೂಪಾಯಿಗಳಷ್ಟಿದೆ ಎಂದು ಶ್ಲಾಘಿಸಿದರು.


ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮಾತನಾಡಿ, ಇಂದು ಅಂಚೆ ಇಲಾಖೆಯ ಸೇವೆಯು ಇತರ ಎಲ್ಲಾ ಇಲಾಖೆಗಳ ಸೇವೆಗಿಂತ ಹೆಚ್ಚು ಜನಪ್ರಿಯವಾಗಿದೆ. ಅಂಚೆ ಇಲಾಖೆಯು ಬ್ಯಾಂಕುಗಳಿಗೆ ಸಮಾನಾಂತರವಾಗಿ ಪೈಪೋಟಿ ನೀಡುತ್ತಿದೆ ಎಂದು ಅಭಿನಂದಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯ್ಯ ಕಟ್ಟೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಆರ್. ರಾಮಕೃಷ್ಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಮೊದಲಾದವರು ಉಪಸ್ಥಿತರಿದ್ದರು.






