ಮಗ ಆಸ್ಪತ್ರೆಗೆ ದಾಖಲು — ಜನರ ನೋವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ
ಸ್ವಂತ ನೋವನು ಮರೆತು ಜನರ ಅಹವಾಲು ಆಲಿಸಿದ ಜನಪ್ರಿಯ ಶಾಸಕ

ಅಕ್ಟೋಬರ್ 6ರಂದು ಸೋಮವಾರ ಶಾಸಕ ಅಶೋಕ್ ರೈರವರು ಎಂದಿನಂತೆ ತಮ್ಮ ಕಚೇರಿಗೆ ಹಾಜರಾಗಿ, ನೂರಾರು ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರ ಸಂಕಷ್ಟಗಳನ್ನು ಆಲಿಸಿದರು. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 7:15 ರವರೆಗೆ ಕಚೇರಿಯಲ್ಲೇ ಇದ್ದ ಅವರು, ಅನೇಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅಧಿಕಾರಿಗಳಿಗೆ ಕರೆಮಾಡಿ ಪರಿಹಾರ ಕ್ರಮ ಕೈಗೊಂಡರು. ತಮ್ಮ ಬಳಿಗೆ ಬಂದ ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಮಾತಾಡಿ ಪ್ರೋತ್ಸಾಹಿಸಿದರು.

ಆದರೆ ಈ ದಿನ ಅವರ ಮನಸ್ಸಿನಲ್ಲಿ ತೀವ್ರವಾದ ನೋವೊಂದು ನೆಲೆಸಿತ್ತು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಶಾಸಕ ಅಶೋಕ್ ರೈರವರ ಪುತ್ರ ಭಾನುವಾರ ಬೆಂಗಳೂರಿನಲ್ಲಿ ನಡೆದ ಬಾಸ್ಕೆಟ್‌ಬಾಲ್ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದಾಗ ಕಾಲು ಜಾರಿ ಎಲುಬು ಮುರಿದಿತ್ತು. ತಕ್ಷಣ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸೋಮವಾರ ಬೆಳಿಗ್ಗೆ 10:30ಕ್ಕೆ ಮಗನ ಕಾಲಿನ ಶಸ್ತ್ರಚಿಕಿತ್ಸೆ ನಡೆಯಿತು. ಈ ವೇಳೆ ಪತ್ನಿ ಸುಮಾ ಅಶೋಕ್ ರೈ ಆಸ್ಪತ್ರೆಯಲ್ಲಿದ್ದರು.

ಜನತೆಗೆ ನೀಡಿದ ಮಾತನ್ನು ಮರೆಯದ ಜನಪ್ರಿಯ ನಾಯಕ
ಮಗನ ಚಿಕಿತ್ಸೆಗೆ ಶಾಸಕರು ಆಸ್ಪತ್ರೆಗೆ ತೆರಳಬೇಕಾಗಿದ್ದರೂ, ಅವರು ತಮ್ಮ ಜನತೆಗೆ ನೀಡಿದ ಮಾತನ್ನು ಮರೆತಿಲ್ಲ. “ಪ್ರತೀ ಸೋಮವಾರ ಕಚೇರಿಯಲ್ಲಿ ಜನರ ಅಹವಾಲು ಸ್ವೀಕರಿಸುತ್ತೇನೆ” ಎಂಬ ವಾಗ್ದಾನವನ್ನು ಕಾಪಾಡಿಕೊಂಡು, ಜನರ ಮಧ್ಯೆ ಇದ್ದರು.

ಈ ಬಗ್ಗೆ ಕೇಳಿದಾಗ ಶಾಸಕರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು: “ನನ್ನ ಮಗನಿಗೆ ಅವಘಡ ಸಂಭವಿಸಿದೆ, ಶಸ್ತ್ರಚಿಕಿತ್ಸೆ ನಡೆದಿದೆ. ಆದರೆ ಜನರು ನನ್ನನ್ನು ನೋಡಲು ಬರುತ್ತಾರೆ, ಅವರ ನೋವನ್ನು ನಿರ್ಲಕ್ಷಿಸಲು ನನಗೆ ಆಗಲಿಲ್ಲ. ಅವರ ಮನಸ್ಸು ನೋಯಿಸುವುದನ್ನು ಇಷ್ಟಪಟ್ಟಿಲ್ಲ” ಎಂದರು.
ಮಗನ ನೋವಿನ ನಡುವೆಯೂ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಅಶೋಕ್ ರೈ ಅವರ ಕಣ್ಣಲ್ಲಿ ತೇವ ತುಂಬಿದ ಕ್ಷಣ, ಅಲ್ಲಿ ಹಾಜರಿದ್ದ ಎಲ್ಲರ ಹೃದಯಗಳನ್ನು ತೇವಗೊಳಿಸಿತು.




