ಕಥೊಲಿಕ್ ಸಭಾ ಮುಕ್ಕ ಘಟಕದ ಅಧ್ಯಕ್ಷೆ ಪ್ರಿಯಾ ಲೋಬೊರವರ ಪುತ್ರ ಪ್ರೀವನ್ ಲೋಬೊ ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆ
ಮುಕ್ಕ ಹೋಲಿ ಸ್ಪಿರಿಟ್ ಧರ್ಮ ಕೇಂದ್ರದ ಯುವ ನಾಯಕನಿಗೆ ಸಾರ್ಥಕ ಗೌರವ

ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಹಾಗೂ PRO ಪಾವ್ಲ್ ರಾಲ್ಫಿ ಡಿಕೋಸ್ತ ತಂಡದಿಂದ ಅಭಿನಂದನೆಗಳ ಮಹಾಪೂರ

ಮಂಗಳೂರು ಧರ್ಮಕ್ಷೇತ್ರದ ಹೋಲಿ ಸ್ಪಿರಿಟ್ ಸಮರ್ಪಿತ ಮುಕ್ಕ ಚರ್ಚ್ ನ ಕಥೊಲಿಕ್ ಸಭಾ ಅಧ್ಯಕ್ಷೆ ಪ್ರಿಯಾ ಲೋಬೊರವರ ಪುತ್ರ, ಪ್ರತಿಭಾವಂತ ಯುವಕ ಪ್ರೀವನ್ ಲೋಬೊರವರು ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿ ಗೌರವ ಪಡೆದಿದ್ದಾರೆ. ಪ್ರೀವನ್ ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಸಿಯಸ್ ಕಾಲೇಜಿನ ದ್ವಿತೀಯ PUC ವರ್ಗದ ವಿದ್ಯಾರ್ಥಿಯಾಗಿದ್ದಾರೆ.

“ನಾಯಕತ್ವ ಅಂದರೆ ಅಧಿಕಾರ ಪ್ರದರ್ಶನವಲ್ಲ, ಹೊಣೆಗಾರಿಕೆ ನಿರ್ವಹಣೆ. ನಾಯಕನು ಮುಂದೆ ಹೋಗುವುದಿಲ್ಲ — ಆತ ತನ್ನ ತಂಡವನ್ನು ಜೊತೆಗಿಟ್ಟು ಬೆಳೆಯಲು ಪ್ರೇರೇಪಿಸುತ್ತಾನೆ. ಯಶಸ್ವಿ ನಾಯಕತ್ವದ ಮೂಲ ತತ್ವ ಶ್ರವಣ, ಸಹಕಾರ ಮತ್ತು ಸೇವೆ. ನಾಯಕನ ಯಶಸ್ಸು ಅವನ ಸುತ್ತಲಿನವರ ಬೆಳವಣಿಗೆಯಲ್ಲಿದೆ. ಯುವಕರು ಪ್ರಾಮಾಣಿಕತೆ ಮತ್ತು ದೃಢಸಂಕಲ್ಪದಿಂದ ಮುಂದೆ ಬಂದಾಗ ಸಮಾಜ ನಿಜವಾದ ಪ್ರಗತಿಯನ್ನು ಕಾಣುತ್ತದೆ.” ಇಂತಹ ಲಕ್ಷಣಗಳು ಪ್ರೀವನ್ ಲೋಬೊರವರಲ್ಲಿ ಎದ್ದು ಕಾಣುತ್ತಿರುವುದರಿಂದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ ಎಂದು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಮಾಜಿ ಕೇಂದ್ರೀಯ ಅಧ್ಯಕ್ಷ ಪಾವ್ಲ್ ರಾಲ್ಫಿ ಡಿಕೋಸ್ತ ಹೇಳಿದ್ದಾರೆ.


“ಪ್ರೀವನ್ ರವರಲ್ಲಿ ಉನ್ನತ ವ್ಯಕ್ತಿತ್ವದ ನಾಯಕತ್ವದ ಎಲ್ಲಾ ಗುಣಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅವರಲ್ಲಿ ಶಿಸ್ತಿನ ಮತ್ತು ಶ್ರದ್ಧೆಯ ಸಂಯೋಜನೆ ಇದೆ. ಪ್ರತಿಯೊಬ್ಬರ ಮಾತು ಆಲಿಸಿ, ಎಲ್ಲರ ಅಭಿಪ್ರಾಯಕ್ಕೆ ಮೌಲ್ಯ ನೀಡುವ ವಿನಯ ಅವರಲ್ಲಿ ಅಡಗಿದೆ. ಅವರು ನಿರ್ಧಾರ ತೆಗೆದುಕೊಳ್ಳುವಾಗ ಸದಾ ತಂಡದ ಒಳಿತನ್ನು ಮೊದಲಿಗೆ ಇಡುವ ಯುವಕ. ಯುವಜನರಿಗೆ ಪ್ರೇರಣೆಯಾದ ಇವರು ಯಾವಾಗಲೂ ಸೇವಾ ಮನೋಭಾವದಿಂದ ಕೆಲಸ ಮಾಡುವವರು. ನಂಬಿಕೆಯಿಂದ, ಸಮರ್ಪಣೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಅವರು ಮುಂದಿನ ಪೀಳಿಗೆಯ ನಿಜವಾದ ನಾಯಕನಾಗಲು ಸಾಧ್ಯವಿದೆ” ಎಂದು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಹೇಳಿದರು.





ಪ್ರೀವನ್ ಅವರ ನೇತೃತ್ವದಲ್ಲಿ ಯುವಜನತೆಗೆ ನೂತನ ಚೈತನ್ಯ ತುಂಬಲಿದೆ ಎಂಬ ವಿಶ್ವಾಸ ಎಲ್ಲರಲ್ಲಿಯೂ ಮೂಡಿದೆ. ಶಿಸ್ತಿನ, ಶ್ರದ್ಧೆಯ ಮತ್ತು ಸೇವಾ ಮನೋಭಾವದ ಪ್ರತೀಕನಾದ ಯುವ ನಾಯಕ ಯುವಕರಿಗೆ ಮಾದರಿಯಾಗಿದ್ದಾರೆ. ಅವರ ಸಾಧನೆ ಧರ್ಮ ಕೇಂದ್ರದ ಹೆಮ್ಮೆ ಹೆಚ್ಚಿಸಿದ್ದು, ಮುಕ್ಕ ಚರ್ಚ್ ಸಮುದಾಯದ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದೆ ಎಂದು ಚರ್ಚ್ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಪಿಂಟೋರವರು ಅಭಿನಂದಿಸಿ ಶುಭ ಹಾರೈಸಿದರು.
ಪ್ರೀವನ್ ರವರ ಸಾಧನೆಗೆ ಮುಕ್ಕ ಚರ್ಚ್ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಪಿಂಟೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸೈಮನ್ ರೊಡ್ರಿಗಸ್, ಕಾರ್ಯದರ್ಶಿ ಆಶಾ ರೊಡ್ರಿಗಸ್, ಆಯೋಗಗಳ ಸಂಚಾಲಕಿ ಜಾನೆಟ್ ಸಿಕ್ವೇರಾ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, ಮಾಜಿ ಅಧ್ಯಕ್ಷ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಾವ್ಲ್ ರಾಲ್ಫಿ ಡಿಕೋಸ್ತ, ನಿಕಟ ಪೂರ್ವ ಅಧ್ಯಕ್ಷ ಹಾಗೂ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮುಕ್ಕ ಘಟಕದ ಕಾರ್ಯದರ್ಶಿ ಶಾಂತಿ ಸುನೀತ ಫೆರ್ನಾಂಡಿಸ್ ಮತ್ತು ಎಲ್ಲಾ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರೀವನ್ ರವರು ಮುಕ್ಕದ ಪ್ರಕಾಶ್ ಹಾಗೂ ಪ್ರಿಯಾ ಲೋಬೊರವರ ಪುತ್ರರಾಗಿದ್ದು, ಪ್ರಿನ್ಸನ್ ಲೋಬೊರವರ ಅಣ್ಣರಾಗಿದ್ದಾರೆ.





