November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಮುಂದಾಳತ್ವದಲ್ಲಿ ರಾಜಕೀಯ ಜಾಗೃತಿ ಸಮಾವೇಶ

“ಜನರಲ್ಲಿ ಸತ್ಯ, ಸೇವಾ ಮನೋಭಾವ ಮತ್ತು ಮತದಾನದ ಜಾಗೃತಿ ಮೂಡಲಿ” – ಫಾದರ್ ಸ್ಟ್ಯಾನಿ ಗೋವಿಯಸ್

ಮಂಗಳೂರು ಧರ್ಮಕ್ಷೇತ್ರದ ಬೆಳ್ತಂಗಡಿ ವಲಯದ ವ್ಯಾಪ್ತಿಯ ಚರ್ಚ್ ಗಳ ಪಾಲನಾ ಸಮಿತಿ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬೆಳ್ತಂಗಡಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ರಾಜಕೀಯ ಜಾಗೃತಿ ಸಮಾವೇಶವು ಅಕ್ಟೋಬರ್ 12ರಂದು ಭಾನುವಾರ ಸಂಜೆ 3 ಗಂಟೆಗೆ ಬೆಳ್ತಂಗಡಿ ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಸಭಾ ಭವನದಲ್ಲಿ ನಡೆಯಿತು.

ಮಡಂತ್ಯಾರು ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಗೋವಿಯಸ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ “ರಾಜಕೀಯದಲ್ಲಿ ಭಾಗವಹಿಸುವುದು ಕೇವಲ ಅಧಿಕಾರಕ್ಕಾಗಿ ಅಲ್ಲ, ಸಮಾಜದ ಒಳಿತಿಗಾಗಿ. ಸತ್ಯ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವು ರಾಜಕೀಯದ ಅಡಿಪಾಯವಾಗಬೇಕು. ಮತದಾನ ಹಕ್ಕು ನಮ್ಮ ಧರ್ಮಾತ್ಮಕ ಕರ್ತವ್ಯವೂ ಆಗಿದೆ. ಜಾಗ್ರತ ಮತದಾರರು ಇದ್ದರೆ ದೇಶ ಪ್ರಗತಿಯ ದಾರಿಯಲ್ಲಿ ಸಾಗುತ್ತದೆ. ಧರ್ಮಗುರುಗಳು, ಯುವಕರು, ಮಹಿಳೆಯರು — ಎಲ್ಲರೂ ರಾಜಕೀಯ ಜಾಗೃತಿಯಲ್ಲಿ ಭಾಗಿಯಾಗಬೇಕು.” ಎಂದು ಹೇಳಿದಾಗ ಈ ಉತ್ಸಾಹಭರಿತ ಸಂದೇಶ ಸಭಿಕರಲ್ಲಿ ಹೊಸ ಚೈತನ್ಯ ತುಂಬಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಉಪ್ಪಿನಂಗಡಿಯ ವಿಲ್ಫ್ರೆಡ್ ಡಿಸೋಜ ಆಗಮಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ಕಥೊಲಿಕ್ ಸಮುದಾಯದ ಜನರಿಗೆ ರಾಜಕೀಯ ಭಾಗವಹಿಸುವಿಕೆ ಅತ್ಯಂತ ಅಗತ್ಯವಾಗಿದೆ. ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸೌಹಾರ್ದತೆ ಉಳಿಸಲು ರಾಜಕೀಯದಲ್ಲಿ ನಮ್ಮ ಧ್ವನಿಯೂ ಕೇಳಿಸಬೇಕು. ಸರ್ಕಾರದ ನೀತಿಗಳು ಮತ್ತು ನಿರ್ಣಯಗಳು ನೇರವಾಗಿ ಜನರ ಬದುಕಿಗೆ ಪ್ರಭಾವ ಬೀರುತ್ತವೆ — ಶಿಕ್ಷಣ, ಆರೋಗ್ಯ, ಉದ್ಯೋಗ, ಅಲ್ಪಸಂಖ್ಯಾತರ ಹಕ್ಕುಗಳು ಇವುಗಳ ರಕ್ಷಣೆಗೆ ನಮ್ಮ ಪ್ರತಿನಿಧಿಗಳು ಇರಬೇಕು. ಆದ್ದರಿಂದ ಕಥೊಲಿಕ್ ಸಮುದಾಯದ ಜನರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ, ತಮ್ಮ ಮೌಲ್ಯಾಧಾರಿತ ಚಿಂತನೆಗಳ ಮೂಲಕ ಉತ್ತಮ ಆಡಳಿತ ಮತ್ತು ಸಾಮಾಜಿಕ ಬದಲಾವಣೆಗೆ ಮಾರ್ಗದರ್ಶಕರಾಗಬಹುದು” ಎಂದು ತಿಳಿಸಿದರು.

ಕಥೊಲಿಕ್ ಸಮುದಾಯದವರು ರಾಜಕೀಯದಲ್ಲಿ ಸಕ್ರಿಯರಾಗಬೇಕು – ಸಂತೋಷ್ ಡಿಸೋಜ ಬಜ್ಪೆ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರಿಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಮಾತನಾಡಿ “ರಾಜಕೀಯದಲ್ಲಿ ಕಥೊಲಿಕ್ ಸಮುದಾಯದ ಜನರು ಏಕೆ ಸೇರಬೇಕು” ಎಂಬ ವಿಷಯದ ಬಗ್ಗೆ ಸವಿವರವಾಗಿ ಹೇಳಿ “ರಾಜಕೀಯವೆಂಬುದು ಸಮಾಜ ಸೇವೆಯ ಶ್ರೇಷ್ಠ ವೇದಿಕೆ. ದೇವರ ಮೌಲ್ಯಗಳು ಮತ್ತು ಮಾನವೀಯತೆ ರಾಜಕೀಯದ ಮೂಲಕವೂ ವ್ಯಕ್ತವಾಗಬಹುದು. ಕಥೊಲಿಕ್ ಸಮುದಾಯದವರು ರಾಜಕೀಯದಲ್ಲಿ ಸಕ್ರಿಯರಾಗದಿದ್ದರೆ, ನಮ್ಮ ಧ್ವನಿ ನಿರ್ಧಾರಗಳ ಹಂತದಲ್ಲಿ ಕೇಳಿಸದು. ನಮ್ಮ ಜನರು ಶಿಕ್ಷಣ, ಪ್ರಾಮಾಣಿಕತೆ ಮತ್ತು ನೈತಿಕತೆ ಎಂಬ ಶಕ್ತಿಯನ್ನು ಹೊಂದಿದ್ದಾರೆ — ಈ ಗುಣಗಳು ರಾಜಕೀಯ ಕ್ಷೇತ್ರಕ್ಕೂ ಅಗತ್ಯ. ಕಥೊಲಿಕ್ ಸಮುದಾಯದ ಜನರು ರಾಜಕೀಯಕ್ಕೆ ಬಂದರೆ, ಸಮಾಜದ ದಿಕ್ಕು ಬದಲಾಗುತ್ತದೆ; ಇಲ್ಲದಿದ್ದರೆ ಕೆಟ್ಟವರು ಆ ಸ್ಥಾನವನ್ನು ತುಂಬುತ್ತಾರೆ. ರಾಜಕೀಯದಲ್ಲಿ ಭಾಗವಹಿಸುವುದು ಮತ ಕೇಳುವುದಕ್ಕಷ್ಟೇ ಅಲ್ಲ, ಮತದಾರರಿಗೆ ಜಾಗೃತಿ ಮತ್ತು ನ್ಯಾಯದ ಧ್ವನಿ ನೀಡುವುದಕ್ಕೂ ಅಗತ್ಯ.” ಎಂದರು

ವೇದಿಕೆಯಲ್ಲಿ ಕಥೊಲಿಕ್ ಸಭಾ ಕೇಂದ್ರಿಯ ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೊ ಬಂಟ್ವಾಳ, ಬೆಳ್ತಂಗಡಿ ವಲಯದ ಅಧ್ಯಕ್ಷ ಅಲ್ಬರ್ಟ್ ಸುನಿಲ್ ಮೊನಿಸ್, ನಿಕಟ ಪೂರ್ವ ಅಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್, ಕಾರ್ಯದರ್ಶಿ ಸ್ಟ್ಯಾನಿ ಪಿಂಟೊ ಉಜಿರೆ, ಬೆಳ್ತಂಗಡಿ ವಲಯದ ಪಾಲನಾ ಪರಿಷದ್ ಕಾರ್ಯದರ್ಶಿ ಜೆರಾಲ್ಡ್ ಮೊರಸ್ ಮಡಂತ್ಯಾರ್, ಬೆಳ್ತಂಗಡಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೊನಿಸ್, ಬೆಳ್ತಂಗಡಿ ಘಟಕದ ಅಧ್ಯಕ್ಷ ಗಿಲ್ಬರ್ಟ್ ಪಿಂಟೊ ಹಾಗೂ ವಲಯ ರಾಜಕೀಯ ಸಂಚಾಲಕ ವಿನ್ಸೆಂಟ್ ಡಿಸೋಜ ಮತ್ತು ವಲಯದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ರಾಜಕೀಯ ಜಾಗೃತಿ ಸಮಾವೇಶದಲ್ಲಿ ಬೆಳ್ತಂಗಡಿ ವಲಯದ ವಿವಿಧ ಚರ್ಚ್ ಗಳ ಧರ್ಮಗುರುಗಳು, ಧರ್ಮಭಗಿನಿಯರು, ಕಥೊಲಿಕ್ ಸಬಾ ಕೇಂದ್ರಿಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ವಲಯದ ಮಾಜಿ ಅಧ್ಯಕ್ಷರು ಸೇರಿದಂತೆ 120 ಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಬೆಳ್ತಂಗಡಿ ವಲಯದ ಕಾರ್ಯದರ್ಶಿ ಜೆರಾಲ್ಡ್ ಮೊರಸ್ ಸ್ವಾಗತಿಸಿದರು. ಬೆಳ್ತಂಗಡಿ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೊನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಅಲ್ಬರ್ಟ್ ಸುನಿಲ್ ಮೊನಿಸ್ ಧನ್ಯವಾದಗಳನ್ನು ಸಮರ್ಪಿಸಿದರು.

You may also like

News

ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ

ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ ಮಾಣಿ
News

ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್  ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು

You cannot copy content of this page