ದೀಪಾವಳಿ ಸಂಭ್ರಮದಲ್ಲಿ ‘ಅಶೋಕ ಜನಮನ’ – ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸೆ
ಬಸವಣ್ಣರ ಕಾಯಕ – ದಾಸೋಹ ತತ್ವಗಳನ್ನು ಅಶೋಕ್ ರೈ ಅಳವಡಿಸಿಕೊಂಡಿದ್ದಾರೆ – ಸಿಎಂ

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಉದ್ಯಮಿ ಅಶೋಕ್ ಕುಮಾರ್ ರೈ ನೇತೃತ್ವದ ‘ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ದೀಪಾವಳಿ ಸಂಭ್ರಮದ ಅಂಗವಾಗಿ ಅಕ್ಟೋಬರ್ 20ರಂದು ಸೋಮವಾರ ನಡೆದ ‘ಅಶೋಕ ಜನಮನ’ ವಸ್ತ್ರ ವಿತರಣಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಿದರು.













ಬಸವಣ್ಣರ ತತ್ವಗಳನ್ನು ಅಳವಡಿಸಿಕೊಂಡ ಅಶೋಕ್ ರೈ :
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯರವರು, “ಬಸವಣ್ಣರು 12ನೇ ಶತಮಾನದಲ್ಲೇ ‘ಕಾಯಕ’ ಮತ್ತು ‘ದಾಸೋಹ’ ಎಂಬ ಎರಡು ಮಹಾತತ್ವಗಳನ್ನು ಬೋಧಿಸಿದ್ದರು. ಪ್ರತಿಯೊಬ್ಬರೂ ಕಾಯಕದಲ್ಲಿ ಭಾಗವಹಿಸಿ ಉತ್ಪಾದನೆ ಮಾಡಬೇಕು ಹಾಗೂ ಅದನ್ನು ಎಲ್ಲರಿಗೂ ಹಂಚಬೇಕು. ಅಶೋಕ್ ರೈಯವರು ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಅಸಮಾನತೆಯನ್ನು ಹೋಗಲಾಡಿಸಲು ಸಮಾನತೆಯನ್ನು ತರಬೇಕು,” ಎಂದು ಹೇಳಿದರು.










ಸಂವಿಧಾನ ಅರಿವು ಅತ್ಯವಶ್ಯ:
ಮುಖ್ಯಮಂತ್ರಿಯವರು ಮುಂದುವರೆದು “ಸಂವಿಧಾನ ರಚಿಸಿದ ಅಂಬೇಡ್ಕರ್ ರವರು 1949 ನವೆಂಬರ್ 25ರಂದು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದ್ದರು. ನಾನು ಎರಡನೇ ಬಾರಿ ಮುಖ್ಯಮಂತ್ರಿ ಆದ ಮೇಲೆ ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಂತೆ ಮಾಡಿದ್ದೇನೆ. ಸಂವಿಧಾನ ಅರಿವಾದರೆ ಮಾತ್ರ ಸಮ-ಸಮಾಜ ನಿರ್ಮಾಣ ಸಾಧ್ಯ. ಯಾವ ಧರ್ಮವೂ ದ್ವೇಷ ಕಲಿಸುವುದಿಲ್ಲ, ಪ್ರೀತಿ ಬೋಧಿಸುತ್ತದೆ” ಎಂದು ನೆನಪಿಸಿದರು.








ಅಶೋಕ್ ರೈಯವರು ಮಾಡುವ ಕೆಲಸ ಎಲ್ಲರಿಗೂ ಮಾದರಿ :
“ಅನ್ನಭಾಗ್ಯ ಯೋಜನೆ ಮಾಡಿದ್ದು ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ. ದುಡ್ಡಿಲ್ಲ ಎನ್ನುತ್ತಿದ್ದರೂ ಸರ್ಕಾರ ಅಭಿವೃದ್ಧಿ ಕಾಮಗಾರಿ ನಿಲ್ಲಿಸಿಲ್ಲ. ಅಶೋಕ್ ರೈಯವರ ಕಾರ್ಯನಿಷ್ಠೆ, ಧಾರ್ಮಿಕತೆ, ದಾನಶೀಲತೆ ಎಲ್ಲರಿಗೂ ಮಾದರಿ. ಅವರ ಒತ್ತಡಕ್ಕೆ ಮಣಿದು ನಾನು ಹಬ್ಬ ಬಿಟ್ಟು ಇಲ್ಲಿಗೆ ಬಂದಿದ್ದೇನೆ” ಎಂದು ಸಿಎಂ ಹಾಸ್ಯಭರಿತವಾಗಿ ಹೇಳಿದರು.


ಜನಮನ ಗೆದ್ದ ‘ಅಶೋಕ ಜನಮನ’ :
ಸಿದ್ದರಾಮಯ್ಯರವರು ಮುಂದಿನ ಚುನಾವಣೆಯಲ್ಲೂ ಪುತ್ತೂರು ಸೇರಿದಂತೆ ಎಂಟೂ ಕ್ಷೇತ್ರಗಳಲ್ಲಿ ಜನರು ಆಶೀರ್ವಾದ ನೀಡಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಜೇನು ಕಚ್ಚಿ ಮೃತಪಟ್ಟ ಮಗುವಿನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹5 ಲಕ್ಷ ನೀಡುವುದಾಗಿ ಘೋಷಿಸಿದರು.
“ಸ್ವಾತಂತ್ರ್ಯ, ಸಮಾನತೆ, ಭಾತೃತ್ವ – ಈ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಸಮಾಜ ಸುಂದರವಾಗುತ್ತದೆ. ಅಶೋಕ್ ರೈ ಹಾಗೂ ಅವರ ಕುಟುಂಬ ವರ್ಗದವರಿಗೆ ಒಳಿತಾಗಲಿ,” ಎಂದು ಸಿದ್ದರಾಮಯ್ಯ ತಮ್ಮ ಭಾಷಣವನ್ನು ಸಮಾಪಿಸಿದರು.





