July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.


ಅವರು ಅಕ್ಟೋಬರ್ 24ರಂದು ಶುಕ್ರವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಪೂಜ್ಯರ ತಾತರಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಕನಸು ಹಾಗೂ ತಂದೆ ರತ್ನವರ್ಮ ಹೆಗ್ಗಡೆಯವರ ಮನಸನ್ನು ಅನುಸರಿಸಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸರ್ವತೋಮುಖ ಪ್ರಗತಿಯೊಂದಿಗೆ ಸಮಾಜಕ್ಕೂ ಅನುಪಮ ಸೇವೆ ನೀಡಿದ್ದಾರೆ.
ಮಹಾತ್ಮ ಗಾಂಧೀಜಿಯವರ ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯದ ಕನಸನ್ನು ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮನಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರದೊಂದಿಗೆ ನನಸಾಗಿ ಮಾಡಿದ್ದಾರೆ. ಪ್ರಧಾನಿ ಮೋದಿಯವರ ವಿಕಸಿತ ಭಾರತ ಕಲ್ಪನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಅನೇಕ ದೀನ-ದಲಿತರ, ಮಹಿಳೆಯರ ಬದುಕಿಗೆ ತಾಯಿ-ತಂದೆ ಹಾಗೂ ಪೋಷಕರಂತೆ ಪ್ರೀತಿ ಮತ್ತು ವಿಶ್ವಾಸದಿಂದ ನಿರಂತರ ಪ್ರೇರಣೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ನವ ಚೈತನ್ಯದೊಂದಿಗೆ ಸ್ವಾವಲಂಬಿ ಜೀವನ ಮಾಡಲು ದಾರಿ ದೀಪವಾಗಿದ್ದಾರೆ.

ಮಹಿಳಾ ಸಬಲೀಕರಣ, ಧಾರ್ಮಿಕ ಸಂಸ್ಕಾರ, ಭಜನಾ ತರಬೇತಿ  ಮೂಲಕ ಸಮಾಜದ ಸರ್ವರೂ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಎಲ್ಲರಿಗೂ ಕಾಯಕಲ್ಪ ನೀಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳಿಗೆ ಕಾಯಕಲ್ಪ, ಆಧುನಿಕ ತಂತ್ರಜ್ಞಾನ ಬಳಸಿ ಸರದಿಸಾಲಿನಲ್ಲಿ ದೇವರದರ್ಶನದ ಸೌಲಭ್ಯ ಇತ್ಯಾದಿ ಅನುಪಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಅಭಿನಂದಿಸಿದರು.


ಹೊಸ ಯೋಜನೆಗಳು:

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೊಸ ಯೋಜನೆಗಳನ್ನು ಪ್ರಕಟಿಸಿದರು. ಉಜಿರೆಯಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭ, ಎಂ.ಆರ್.ಐ. ಘಟಕ, 2000ನೇ ಮದ್ಯವರ್ಜನ ಶಿಬಿರ ಧರ್ಮಸ್ಥಳದಲ್ಲಿ ನವಂಬರ್ 6ರಂದು ನಡೆಯಲಿದ್ದು, 1,35,000 ವ್ಯಸನ ಮುಕ್ತರು ಭಾಗವಹಿಸಲಿದ್ದಾರೆ ಎಂದು ಹೆಗ್ಗಡೆಯವರು ಪ್ರಕಟಿಸಿದರು. ಧರ್ಮಸ್ಥಳದ ಅಶೋಕನಗರದಲ್ಲಿ 2 ಕೋಟಿ 41 ಲಕ್ಷ ರೂಪಾಯಿ ರಾಜ್ಯಸಭಾ ಸದಸ್ಯರ ಅನುದಾನದಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ, ಬೀದಿದೀಪಗಳ ಅಳವಡಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಈಗಾಗಲೇ 300 ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಪೂರೈಸಿದ್ದು, ಮುಂದಿನ ವರ್ಷ 13 ದೇವಾಲಯಗಳನ್ನು ಜೀರ್ಣೋದ್ಧಾರಕ್ಕಾಗಿ ಗುರುತಿಸಲಾಗಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 25,500 ಕೋಟಿ ರೂಪಾಯಿ ಬಿ.ಸಿ. ಟ್ರಸ್ಟ್ ಮೂಲಕ ವಿತರಿಸಲಾಗಿದೆ ಎಂದರು. 2026ರ ಮಾರ್ಚ್ ಒಳಗೆ 1000 ಕೆರೆಗಳಿಗೆ ಕಾಯಕಲ್ಪ ನೀಡಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು. ಬೆಳ್ತಂಗಡಿಯಲ್ಲಿ 2 ಎಕ್ರೆ ಜಾಗದಲ್ಲಿ 90 ಕೋಟಿ ರೂಪಾಯಿ ವೆಚ್ಚದಲ್ಲಿ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು. ಕ್ಷೇತ್ರದ ಎಲ್ಲಾ ಭಕ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು “ನಾವು ಸದಾ ನಿಮ್ಮೊಂದಿಗಿದ್ದೇವೆ” ಎಂದು ತಮಗೆ ಭರವಸೆ ನೀಡಿರುವುದರಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ಉತ್ಸಾಹ ಮೂಡಿಬಂದಿದೆ ಎಂದರು. ನೀವೆಲ್ಲರೂ ತೋರಿಸಿದ ಭಕ್ತಿ, ಪ್ರೀತಿ-ವಿಶ್ವಾಸ ಮತ್ತು ಗೌರವವನ್ನು ಶ್ರೀ ಸ್ವಾಮಿಗೆ ಅರ್ಪಿಸುವುದಾಗಿ ಹೆಗ್ಗಡೆಯವರು ತಿಳಿಸಿದರು.

ತನ್ನ ಸೇವಾಕಾಯಕದಲ್ಲಿ ಪತ್ನಿ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಸಕ್ರಿಯ ಸಹಕಾರವನ್ನು ಧನ್ಯತೆಯಿಂದ ಸ್ಮರಿಸಿದರು. ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರ ಆರ್ಥಿಕ ಸ್ವಾವಲಂಬನೆಗೆ ಹೆಗ್ಗಡೆಯವರು ಸೇವಾಕಾರ್ಯಗಳ ಮೂಲಕ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು. ಸತ್ಯ, ಧರ್ಮ, ನ್ಯಾಯ-ನೀತಿಯ ಸನ್ಮಾರ್ಗದಲ್ಲಿ ನಡೆದು ಆದರ್ಶ ಸಮಾಜ ಸುಧಾರಕರಾಗಿ ಎಲ್ಲರಿಗೂ ಶಾಂತಿ ಮತ್ತು ಪ್ರೀತಿಯ ಸಂದೇಶ ನೀಡುವ ಹೆಗ್ಗಡೆಯವರು ಸರ್ವರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.
ಕಂಚಿಕಾಮಕೋಟಿ ಪೀಠದ ಪ್ರತಿನಿಧಿ ಗುರುಚರಣಮೂರ್ತಿ ಶುಭಾಶಂಸನೆ ಮಾಡಿದರು.


ಡಾ. ವಿಘ್ನರಾಜ ಮತ್ತು ಡಾ. ಪವನ್ ಸಂಪಾದಿಸಿದ “ವೃಷಭೇಶ್ವರ” ಗ್ರಂಥವನ್ನು ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page