ಕಥೊಲಿಕ್ ಸಭಾ ಕಾಸರಗೋಡು ವಲಯದ ವತಿಯಿಂದ ಬೊವಿಕಾನ ಚರ್ಚ್ ನಲ್ಲಿ ಮೆಗಾ ಬೈಬಲ್ ಕ್ವಿಜ್
ಮರಿಯಾಶ್ರಮ ಚರ್ಚ್ ಸದಸ್ಯರಿಗೆ ಒಲಿದ ದ್ವಿತೀಯ ಸ್ಥಾನ

ಕಥೊಲಿಕ್ ಸಭಾ ಸಂತ ತೋಮಸರ ವಲಯ ಕಾಸರಗೋಡು ಇವರ ಆಶ್ರಯದಲ್ಲಿ ಬೋವಿಕಾನ ಪುನರುತ್ಥಾನ ಧರ್ಮಕೇಂದ್ರದಲ್ಲಿ ಆಯೋಜಿಸಲಾದ ಮೆಗಾ ಬೈಬಲ್ ಕ್ವಿಜ್ ಸ್ಪರ್ಧೆಯಲ್ಲಿ ಮರಿಯಾಶ್ರಮ ಧರ್ಮಕೇಂದ್ರದ ಸದಸ್ಯರಿಗೆ ದ್ವಿತೀಯ ಸ್ಥಾನ ಲಭಿಸಿದೆ. ಈ ಸ್ಪರ್ಧೆಯಲ್ಲಿ ಫಾನ್ಸಿಸ್ ಡಿಸೋಜ, ಜೊಯ್ ಡಿಸೋಜ, ಸ್ಟ್ಯಾನಿ ಡಿಸೋಜ, ಜನಿಫರ್ ಡಿಸೋಜ, ಜೇಶ್ಮಾ ಡಿಕೋಸ್ತಾ ಹಾಗೂ ಸುನೀಲ್ ಕ್ರಾಸ್ತಾ ಭಾಗವಹಿಸಿದ್ದರು.
ಬೋವಿಕಾನ ಚರ್ಚ್ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಕ್ಲಾಡಿ ವಾಸ್ ರವರು ಮಾತನಾಡಿ, “ಬೈಬಲ್ ಕ್ವಿಜ್ ಸ್ಪರ್ಧೆಯಿಂದ ಆಗುವ ಲಾಭಗಳು ಅನೇಕ — ದೇವರ ವಚನದ ಅರಿವು ಹೆಚ್ಚಾಗುತ್ತದೆ. ಆತ್ಮೀಯ ಬೆಳವಣಿಗೆಗೆ ನೆರವಾಗುತ್ತದೆ. ಸ್ಮರಣಶಕ್ತಿ ಮತ್ತು ತಾರ್ಕಿಕ ಚಿಂತನೆ ಬೆಳೆಯುತ್ತದೆ. ಸಹಕಾರ ಮನೋಭಾವ ರೂಢಿಸಿಕೊಳ್ಳುತ್ತದೆ” ಎಂದು ಅವರು ಹೇಳಿದರು.

ಬೈಬಲ್ ಕ್ವಿಜ್ ದೇವರ ವಾಕ್ಯವನ್ನು ಹೃದಯದಲ್ಲಿ ಬಿತ್ತುವ ಕಾರ್ಯ – ಸಂತೋಷ್ ಡಿಸೋಜ ಬಜ್ಪೆ
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಮಾತನಾಡಿ “ನಮ್ಮ ಮಕ್ಕಳು ಹಲವು ವಿಷಯಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ದೇವರ ವಚನವನ್ನು ಹೃದಯದಲ್ಲಿ ನೆನಪಿಸಿಕೊಳ್ಳುವುದು ಅತ್ಯಂತ ಅಮೂಲ್ಯವಾದ ಆಶೀರ್ವಾದ. ಬೈಬಲ್ ಕ್ವಿಜ್ ದೇವರ ವಾಕ್ಯವನ್ನು ಅವರ ಹೃದಯದಲ್ಲಿ ನೆಡುವ ಬಿತ್ತನೆ ಕಾರ್ಯವಾಗಿದೆ. “ನಾನು ನಿನ್ನ ವಾಕ್ಯವನ್ನು ನನ್ನ ಹೃದಯದಲ್ಲಿ ಸಂಗ್ರಹಿಸಿದ್ದೇನೆ; ನಿನಗೆ ವಿರೋಧವಾಗಿ ಪಾಪ ಮಾಡಬಾರದೆಂದು.” ಪವಿತ್ರ ಪುಸ್ತಕದಲ್ಲಿರುವ ಕೀರ್ತನೆ 119:11 ಇದರಲ್ಲಿರುವ ವಚನವನ್ನು ಅವರು ಉಲ್ಲೇಖಿಸಿದರು. ಈ ವಾಕ್ಯವು ಬೈಬಲ್ ಕ್ವಿಜ್‌ನ ಹೃದಯ. ಹೀಗಾಗಿ, ನಾವು ಕೇವಲ ಸ್ಪರ್ಧಿಸಲು ಅಲ್ಲ, ದೇವರ ವಾಕ್ಯವನ್ನು ಪ್ರೀತಿಸಲು, ಅದನ್ನು ತಿಳಿದುಕೊಳ್ಳಲು ಮತ್ತು ಅದರಂತೆ ನಡೆಯಲು ಭಾಗವಹಿಸೋಣ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, ವಲಯ ಅಧ್ಯಕ್ಷ ಫ್ರಾನ್ಸಿಸ್ ಮೊಂತೇರೊ ತಲಪಾಡಿ, ಕಾರ್ಯದರ್ಶಿ ಜಾರ್ಜ್ ಡಿಸೋಜ, ಡೀಕನ್ ಜಿಕ್ಸನ್, ಘಟಕದ ಅಧ್ಯಕ್ಷ ಕಪಿಲ್ ಡಿಸೋಜ, ಧರ್ಮಕೇಂದ್ರದ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನಿಲ್, ಕಾರ್ಯದರ್ಶಿ ಮರಿಯಾ ಗೊರೆಟ್ಟಿ ಉಪಸ್ಥಿತರಿದ್ದರು. ರೆನಿಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಒಟ್ಟು ಒಂಬತ್ತು ಘಟಕಗಳು ಈ ಬೈಬಲ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.





