ಮೊಗರ್ನಾಡ್ ಚರ್ಚ್ ನ 250 ವರ್ಷದ ಜುಬಿಲಿ ಪ್ರಯುಕ್ತ ಕ್ರೀಡಾಕೂಟ
ಏಕತೆಯ ಸ್ಪಂದನ – ಸಮುದಾಯದ ಒಗ್ಗಟ್ಟಿಗೆ ಜೀವಂತ ಸಾಕ್ಷಿ

ಮಂಗಳೂರು ಧರ್ಮಕ್ಷೇತ್ರದ ಮೊಗರ್ನಾಡ್ ದೇವಾ ಮಾತಾ ಚರ್ಚ್ ನ 250ನೇ ಜುಬಿಲಿ ಮಹೋತ್ಸವದ ಅಂಗವಾಗಿ ಚರ್ಚ್ ವ್ಯಾಪ್ತಿಯ ಸದಸ್ಯರಿಗೆ ಅಕ್ಟೋಬರ್ 26ರಂದು ಭಾನುವಾರ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ ಹಾಗೂ ಡಿಕನ್ ಆವಿಲ್ ಸಾಂತುಮಾಯರ್ ರವರೊಂದಿಗೆ ದಿವ್ಯ ಬಲಿಪೂಜೆಯನ್ನು ನಡೆಸಿ ಎಲ್ಲಾ ಕ್ರೀಡಾಪಟುಗಳಿಗೆ ಆಶೀರ್ವಾದಗಳನ್ನು ನೀಡಿದರು.













ಪೂಜೆಯ ಬಳಿಕ ಅಮ್ಟೂರು ದೇವಾ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ಕ್ರೀಡಾಕೂಟವನ್ನು ಮೊಗರ್ನಾಡ್ ಚರ್ಚ್ ನವರೇ ಆದ ಯುವ ವಕೀಲ ಅರುಣ್ ರೋಷನ್ ಡಿಸೋಜ ಉದ್ಘಾಟಿಸಿ ಮಾತನಾಡಿದ ಅವರು ನನ್ನ ತಾಯ್ನಾಡಿನ ಚರ್ಚ್ ನ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಬಹಳ ಸಂತೋಷವಾಗಿದೆ. ನನ್ನ ಹೃದಯ ತುಂಬಿ ಬಂದಿದೆ. ಗೆಲುವು ಮತ್ತು ಸೋಲು ಎರಡನ್ನೂ ಒಂದೇ ಮನೋಭಾವದಿಂದ ಸ್ವೀಕರಿಸಲು ಪ್ರೋತ್ಸಾಹಿಸಿದರು. “ವಿರಾಟ್ ಕೊಹ್ಲಿ ಸಹ ಅನೇಕ ಸೋಲುಗಳ ನಂತರವೇ ಪ್ರಸಿದ್ಧ ಆಟಗಾರರಾದರು. ಆದ್ದರಿಂದ, ಪ್ರತೀ ಆಟಗಾರನು ಸೋತ ನಂತರವೂ ಪ್ರಯತ್ನವನ್ನು ಮುಂದುವರಿಸಬೇಕು” ಎಂದು ಹೇಳಿದರು.












“ಪ್ರತೀ ಧರ್ಮಕೇಂದ್ರಗಳಲ್ಲಿ ಕೇವಲ ಪ್ರಾರ್ಥನೆ, ಸೇವೆ ಮತ್ತು ಧಾರ್ಮಿಕ ಚಟುವಟಿಕೆಗಳಷ್ಟೇ ಅಲ್ಲ, ದೇಹದ, ಮನಸ್ಸಿನ ಮತ್ತು ಸಮುದಾಯದ ಅಭಿವೃದ್ಧಿಗೆ ಸಹಾಯಕವಾದ ಕ್ರೀಡಾಕೂಟಗಳು ಅತ್ಯಂತ ಅವಶ್ಯಕ. ಕ್ರೀಡೆ ಎಂದರೆ ಕೇವಲ ಗೆಲುವು-ಸೋಲಿನ ವಿಷಯವಲ್ಲ — ಅದು ಶಿಸ್ತಿನ, ಸಹನೆ, ತಂಡ ಭಾವನೆಯ ಮತ್ತು ಪರಸ್ಪರ ಗೌರವದ ಪಾಠ. ಚರ್ಚ್ ಅಥವಾ ಯಾವುದೇ ಧಾರ್ಮಿಕ ಕೇಂದ್ರವು ತನ್ನ ಸದಸ್ಯರನ್ನು ಧಾರ್ಮಿಕವಾಗಿ ಬಲಪಡಿಸುವ ಜೊತೆಗೆ, ಮಾನವೀಯವಾಗಿ ಮತ್ತು ದೈಹಿಕವಾಗಿ ಬಲಪಡಿಸಬೇಕಾಗಿದೆ. ಆ ಕಾರಣಕ್ಕೇ ಇಂತಹ ಕ್ರೀಡಾಕೂಟಗಳು ಸಮುದಾಯದ ಏಕತೆಯನ್ನು ಬಲಪಡಿಸುತ್ತವೆ. ವಿಭಿನ್ನ ವಾರ್ಡ್‌ಗಳಿಂದ, ವಿಭಿನ್ನ ವಯಸ್ಸಿನವರು ಒಂದೇ ಮೈದಾನದಲ್ಲಿ ಸೇರಿ, ಒಂದೇ ಉತ್ಸಾಹದಲ್ಲಿ ಭಾಗವಹಿಸುವುದು ನಮ್ಮ ಧಾರ್ಮಿಕ ಜೀವನದ ‘ಏಕತೆ ಮತ್ತು ಸಹಭಾಗಿತ್ವ’ ಎಂಬ ಮೌಲ್ಯಗಳನ್ನು ಜೀವಂತವಾಗಿ ತೋರಿಸುತ್ತದೆ” ಎಂದು ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಡಿಮೆಲ್ಲೊರವರು ತಿಳಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಐದು ವಲಯಗಳ ಆಟಗಾರರು ಆಕರ್ಷಕ ಪಥಸಂಚಲನದಲ್ಲಿ ಭಾಗವಹಿಸಿ ಎಲ್ಲರ ಹೃದಯ ಗೆದ್ದರು. ಚರ್ಚ್ ಪಾಲನಾ ಸಮಿತಿಯ ಸದಸ್ಯರು, ಸಹಾಯಕ ಧರ್ಮಗುರುಗಳು, ಡೀಕನ್, ಧಾರ್ಮಿಕ ಸಹೋದರರು, ಧರ್ಮಭಗಿನಿಯರು, ಮುಖ್ಯೋಪಾಧ್ಯಾಯಿನಿ ಹಾಗೂ ವಾರ್ಡ್ ಮುಖಂಡರು ಬಲೂನ್‌ಗಳನ್ನು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.





ಸುಮಾರು 550 ಆಟಗಾರರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ರೆನ್ನಿ ಫೆರ್ನಾಂಡಿಸ್ ಎಲ್ಲಾ ಆಟಗಾರರಿಗೆ ಪ್ರಮಾಣ ವಚನ ಬೋಧಿಸಿದರು. ಮಕ್ಕಳು, ಯುವಕರು ಮತ್ತು ವಯಸ್ಕರಿಗಾಗಿ ನಾನಾ ವಿಭಾಗಗಳಲ್ಲಿ ಕ್ರೀಡಾ ಸ್ಪರ್ಧೆಗಳು ನಡೆದವು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ವಕೀಲ ಅರುಣ್ ರೋಶನ್ ಡಿಸೋಜರವರನ್ನು ಸನ್ಮಾನಿಸಲಾಯಿತು. ಪಾಣೆ ಮಂಗಳೂರಿನ ಶಾರದಾ ಹೈಸ್ಕೂಲಿನ ಅಜಿತ್ ಮತ್ತು ಬಜಾಲ್ ಸೈಂಟ್ ಜೋಸೆಫ್ ಶಾಲೆಯ ನಾಗಪ್ಪ ತೀರ್ಪುಗಾರರಾಗಿದ್ದರು.


ಕಾರ್ಯಕ್ರಮದಲ್ಲಿ ಚರ್ಚ್ ಪ್ರದಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವಾ ಮಾತಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ದೇವಾ ಮಾತಾ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಆ್ಯನ್ನಿ, ಜುಬಿಲಿ ಸಂಚಾಲಕ ನವೀನ್, ಡಿಕನ್ ಆವಿಲ್ ಸಾಂತುಮಾಯರ್, ಬ್ರದರ್ ಪ್ರಿಸ್ಟನ್, ಕ್ರೀಡಾ ಸಮಿತಿ ಸಂಚಾಲಕ ಜೋಯೆಲ್ ಅಂದ್ರಾದೆ ಹಾಗೂ ಅನೇಕ ಸದಸ್ಯರು ಹಾಜರಿದ್ದರು.


ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ಎಲ್ಲಾ ಆಟಗಾರರನ್ನು, ಅತಿಥಿಗಳು ಮತ್ತು ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಜೋಯೆಲ್ ಆಂದ್ರಾದೆ ಸ್ವಾಗತಿಸಿದರು ಮತ್ತು ರೆನ್ನಿ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಜುಬಿಲಿ ಸಮಿತಿಯ ಎಲ್ಲಾ ಸದಸ್ಯರ ಶ್ರಮದಿಂದ ಈ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿತು. ಜೈಸನ್ ಕ್ರಾಸ್ತಾ, ನವೀನ್ ರಾಜೇಶ್, ಜೋಯೆಲ್ ಅಂದ್ರಾದೆ ಹಾಗೂ ಕ್ರೀಡಾ ಸಮಿತಿಯ ಸದಸ್ಯರು ಕ್ರೀಡಾ ಸ್ಪರ್ಧೆಗಳನ್ನು ಸಂಯೋಜಿಸಿದರು. ಕೊನೆಯಲ್ಲಿ ಕ್ಯಾರಲ್ ಕ್ರಾಸ್ತಾ ವಂದನಾರ್ಪಣೆ ಮಾಡಿದರು.




