ಬಂಟ್ವಾಳದ ನೇತ್ರಾವತಿ ನದಿಗೆ ಹಾರಿ ಮೊಗರ್ನಾಡ್ ನಿವಾಸಿ ಪೀಟರ್ ಲೋಬೊ ಆತ್ಮಹತ್ಯೆ
ಬಂಟ್ವಾಳ ತಾಲೂಕಿನ ಮೊಗರ್ನಾಡ್ ಮಾರ್ನಬೈಲ್ ನಿವಾಸಿ 60 ವರ್ಷ ಪ್ರಾಯದ ಪೀಟರ್ ಲೋಬೊ ಎಂಬುವವರು ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದು, ತಾನು ಯಾರಿಗೂ ಅವಲಂಬನೆಯಾಗಬಾರದೆಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ದೂರುದಾರರಾದ ಅವರ ಪತ್ನಿ ಅನಿತಾ ಲೋಬೊರವರು ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ 28ರಂದು ಮಂಗಳವಾರ ರಾತ್ರಿ ಊಟದ ನಂತರ ಪೀಟರ್ ಲೋಬೊ ಮಲಗಿದ್ದರು. ರಾತ್ರಿ ವೇಳೆ ಅವರಿಗೆ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಂಡು, ಬೆಳಿಗ್ಗೆ 5.10ಕ್ಕೆ ಮನೆಯಿಂದ ಆಟೋದಲ್ಲಿ ಹೊರಟರು.

ತನ್ನ ಕಾಯಿಲೆಯಿಂದ ಬೇಸತ್ತು ಅಕ್ಟೋಬರ್ 29ರಂದು ಬುಧವಾರ ಬೆಳಿಗ್ಗೆ 6.10 ರಿಂದ 30ರಂದು ಗುರುವಾರ ಬೆಳಿಗ್ಗೆ 11.00ರ ನಡುವೆ ಬಂಟ್ವಾಳದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವುದು ತಿಳಿದುಬಂದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ:47/2025ರಡಿ ಕಲಂ 194 BNSS 2023 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.





