ನವೆಂಬರ್ 2ರಂದು ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ
ಐತಿಹಾಸಿಕ 50 ವರ್ಷದ ಪಯಣ

MLC ಐವನ್ ಡಿಸೋಜ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿ
ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವು ನವೆಂಬರ್ 2ರಂದು ಭಾನುವಾರ ಸಂಜೆ 4.00 ಗಂಟೆಗೆ ನಗರದ ಸುವರ್ಣ ರಂಗರಾವ್ ಪುರಭವನ ಮಂಗಳೂರು ಇಲ್ಲಿ ಭವ್ಯವಾಗಿ ನಡೆಯಲಿದೆ. 1975ರಲ್ಲಿ ವಂದನೀಯ ಫಾದರ್ ಫ್ರೆಡ್. ವಿ. ಪಿರೇರಾರವರ ನೇತೃತ್ವದಲ್ಲಿ ಸ್ಥಾಪಿತವಾದ ಈ ಸಂಘವು, ಕಳೆದ ಐದು ದಶಕಗಳಿಂದ ಆಟೋರಿಕ್ಷಾ ಮತ್ತು ಕಾರು ಚಾಲಕರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿದೆ.
ಚಾಲಕರಿಗೆ ಆರ್ಥಿಕ ಬಲ — ಸಾಲ ಸೌಲಭ್ಯಗಳಿಂದ ಸ್ವಾವಲಂಬನೆ:
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸಿಗದ ಸಂದರ್ಭಗಳಲ್ಲಿ ಈ ಸಂಘವು ಸಾವಿರಾರು ಆಟೋರಿಕ್ಷಾ ಮತ್ತು ಕಾರು ಚಾಲಕರಿಗೆ ಸಾಲ ಸೌಲಭ್ಯ ಒದಗಿಸಿದೆ. ಮಂಗಳೂರಿನ ಶೇಕಡಾ 50ರಷ್ಟು ಚಾಲಕರು ಈ ಸಂಘದ ಸದಸ್ಯರಾಗಿದ್ದು, ಪೆಟ್ರೋಲ್ ಪಂಪ್, ಬ್ಯಾಂಕ್ ಮತ್ತು ಸಹಕಾರಿ ಚಟುವಟಿಕೆಗಳ ಮೂಲಕ ಸದಸ್ಯರ ಸ್ವಉದ್ಯೋಗಕ್ಕೆ ಬೆಂಬಲ ನೀಡಲಾಗಿದೆ.
ಸಂಘದ ವಿಸ್ತರಣೆ ಮತ್ತು ಸೇವೆ:
ಸಂಸ್ಥೆಯ ಕೇಂದ್ರ ಕಛೇರಿ ಬಲ್ಮಠದ ಮೈಲ್‌ಸ್ಟೋನ್–25 ಕಟ್ಟಡದ ಮೂರನೇ ಮಹಡಿಯಲ್ಲಿ ಇದೆ. ಶಾಖೆ ತೊಕ್ಕೊಟ್ಟು–ಪೆರ್ಮನ್ನೂರು ಚರ್ಚ್ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಂಸ್ಥೆಯ ಸದಸ್ಯತ್ವವು ಸುಳ್ಯದಿಂದ ಮುಲ್ಕಿವರೆಗೆ ವಿಸ್ತರಿಸಿಕೊಂಡಿದ್ದು, ಪ್ರಸ್ತುತ 17 ನಿರ್ದೇಶಕರು ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸುವರ್ಣ ಮಹೋತ್ಸವದ ವಿಶೇಷ ಕಾರ್ಯಕ್ರಮಗಳು:
ಮಹೋತ್ಸವದ ಅಂಗವಾಗಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ಸದಸ್ಯರು ಮತ್ತು ಸಾರ್ವಜನಿಕರಿಗೆ ಕ್ರೀಡಾಕೂಟ ನಡೆಯಲಿದೆ.
ಉದ್ಘಾಟನೆ ರಾಕೇಶ್ ಮಲ್ಲಿ, ಅಧ್ಯಕ್ಷರು – ಅಮ್ಮೇಚೂರು ಕಬ್ಬಡಿ ಅಸೋಸಿಯೇಷನ್ ಇವರು ನೆರವೇರಿಸಲಿದ್ದಾರೆ. ಟೌನ್‌ಹಾಲ್ ಆವರಣದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಹಗ್ಗಜಗ್ಗಾಟ ಹಾಗೂ ಅನೇಕ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 1.00 ಗಂಟೆಗೆ ನೃತ್ಯ ಸ್ಪರ್ಧೆ ನಡೆಯಲಿದ್ದು, ಹಲವು ತಂಡಗಳು ಈಗಾಗಲೇ ನೋಂದಣಿಯಾಗಿವೆ.
ಸುವರ್ಣ ಸನ್ಮಾನ ಮತ್ತು ಸ್ಮರಣ ಸಂಚಿಕೆ ಬಿಡುಗಡೆ:
ಸಂಜೆ 4.00 ಗಂಟೆಗೆ ಮುಖ್ಯ ಕಾರ್ಯಕ್ರಮ ಆರಂಭವಾಗಲಿದ್ದು, ಸುವರ್ಣ ಮಹೋತ್ಸವದ ಸವಿ ನೆನೆಪಿಗಾಗಿ “ಸ್ಮರಣ ಸಂಚಿಕೆ” ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಆಶೀರ್ವಚನ: ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದನ್ಹಾ – ಧರ್ಮಾಧ್ಯಕ್ಷರು ಮಂಗಳೂರು ಧರ್ಮಕ್ಷೇತ್ರ.
ಉದ್ಘಾಟನೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು – ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.
ಸ್ಮರಣ ಸಂಚಿಕೆ ಬಿಡುಗಡೆ: ಸನ್ಮಾನ್ಯ ಯು.ಟಿ. ಖಾದರ್, ಸಭಾಧ್ಯಕ್ಷರು – ಕರ್ನಾಟಕ ವಿಧಾನಸಭೆ
ಅಧ್ಯಕ್ಷತೆ: MLC ಐವನ್ ಡಿಸೋಜ, ಅಧ್ಯಕ್ಷರು – ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ, ಮಂಗಳೂರು.

ಸೇವೆ ಮಾಡಿದವರಿಗೆ ಗೌರವ:
50 ವರ್ಷಗಳ ಸೇವೆಯ ಪಯಣದಲ್ಲಿ ಸಂಘದ ಅಭಿವೃದ್ಧಿಗೆ ಕೊಡುಗೆ ನೀಡಿದ ಸುಮಾರು 50 ಮಂದಿ ಮಹಾನಿಯರುಗಳಿಗೆ “ಸುವರ್ಣ ಮಹೋತ್ಸವ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತದೆ.
ಇದಲ್ಲದೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಪಕ ಸದಸ್ಯರು, ಕಾನೂನು ಸಲಹೆಗಾರರು, ಠೇವಣಿದಾರರು, ಪಿಗ್ನಿ ಕಲೆಕ್ಟರ್ಸ್, ಮಹಿಳಾ ಚಾಲಕರು, ಅಪಘಾತರಹಿತ ಚಾಲಕರು ಹಾಗೂ ಉತ್ತಮ ಗ್ರಾಹಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ:
ಸಂಘದ ವತಿಯಿಂದ ನಡೆದ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದಲ್ಲಿನ 200 ಮಂದಿಗೆ ಕನ್ನಡಕ ವಿತರಣೆ ನಡೆಯಲಿದ್ದು, ಈ ವಿತರಣೆಯನ್ನು ನವೀನ್ ಕುಮಾರ್ ಎಂ.ಜಿ., ಡೆಪ್ಯುಟಿ ಜನರಲ್ ಮ್ಯಾನೇಜರ್, ಹೆಚ್.ಪಿ.ಸಿ.ಎಲ್ ಮಂಗಳೂರು ಇವರು ನೆರವೇರಿಸಲಿದ್ದಾರೆ.
ಸಾರ್ವಜನಿಕರ ಸಹಕಾರ ಕೋರಿದ ಸಂಘದ ಅಧ್ಯಕ್ಷ MLC ಐವನ್ ಡಿಸೋಜ ಹಾಗೂ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಈ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಸಿದ್ಧರಾಗಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು, ಸದಸ್ಯರು ಹಾಗೂ ನಾಗರಿಕರು ಭಾಗವಹಿಸಲಿದ್ದಾರೆ ಎಂದು ಇಂದು ಅಕ್ಟೋಬರ್ 31ರಂದು ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ MLC ಐವನ್ ಡಿಸೋಜ, ಮ್ಯಾಕೊ ಸೊಸೈಟಿ ಅಧ್ಯಕ್ಷರಾದ ಪ್ರಮೋದ್ ವಾಸ್, ಸಿರಿಲ್ ಡಿಸೋಜ, ಭಾಸ್ಕರ್ ರಾವ್, ಬಬಿತಾ ಡಿಸೋಜ, ವಸಂತ್ ಶೆಟ್ಟಿ ಕಣ್ಣೂರು, ಪಿ.ಪಿ. ವರ್ಗೀಸ್, ಜೇಮ್ಸ್, ವಿದ್ಯಾ ತೊರಸ್ ಹಾಗೂ ರಾಜೇಶ್ ಉಪಸ್ಥಿತರಿದ್ದರು.
ಸಂಪರ್ಕ: [email protected]




