ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ — ಸಚಿವ ದಿನೇಶ್ ಗುಂಡೂರಾವ್ ಅವರ ಉತ್ಸಾಹಭರಿತ ರಾಜ್ಯೋತ್ಸವ ಸಂದೇಶ
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, MLC ಐವನ್ ಡಿಸೋಜ, MLC ಮಂಜುನಾಥ್ ಭಂಡಾರಿ ಇವರ ಘನ ಉಪಸ್ಥಿತಿಯಲ್ಲಿ ನೆಹರು ಮೈದಾನದಲ್ಲಿ ಬಣ್ಣದ ಸಂಭ್ರಮ


ದಕ್ಷಿಣ ಕನ್ನಡ ಜಿಲ್ಲಾ ಆಡಳಿತದ ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಇಂದು ನವಂಬರ್ 01 ರಂದು ಶನಿವಾರ ಬಹಳ ಅದ್ಧೂರಿಯಾಗಿ ಆಚರಿಸಲಾಯಿತು. ರಾಜ್ಯೋತ್ಸವದ ಧ್ವಜಾರೋಹಣ ಮತ್ತು ರಾಜ್ಯೋತ್ಸವದ ಸಂದೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ದಿನೇಶ್ ಗುಂಡೂರಾವ್ ರವರು ನೀಡಿದರು.
ಈ ಭವ್ಯ ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯರಾದ ಸನ್ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಹಾಗೂ ಮಂಜುನಾಥ್ ಭಂಡಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ದರ್ಶನ್ ಎಚ್.ವಿ., ಪೋಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಕೆ., ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರೀ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಅಮೈ ಮಹಾಲಿಂಗ ನಾಯ್ಕ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.




“ಕನ್ನಡ ನುಡಿ ಉಳಿಸಿ ಬೆಳೆಸೋಣ, ಕನ್ನಡಿಗರ ಏಕತೆ ಮತ್ತು ಪ್ರಗತಿ ನಮ್ಮ ಧ್ಯೇಯ” – ಗುಂಡೂರಾವ್
ಕಾರ್ಯಕ್ರಮದಲ್ಲಿ ಮಾತನಾಡಿದ ಸನ್ಮಾನ್ಯ ದಿನೇಶ್ ಗುಂಡೂರಾವ್ ರವರು, “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಎಂಬ ಹುಯಿಲಗೋಳ ನಾರಾಯಣ ರಾಯರ ಕವಿತೆಯ ಸಾಲುಗಳನ್ನು ನೆನಪಿಸಿಕೊಂಡು, ಕನ್ನಡದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಿದರು.
ಅವರು ತಮ್ಮ ಭಾಷಣದಲ್ಲಿ ಕನ್ನಡ ಸಂಸ್ಕೃತಿ, ಪರಂಪರೆ ಮತ್ತು ಜನಪರ ಆಡಳಿತದ ಮಹತ್ವವನ್ನು ಪ್ರಸ್ತಾಪಿಸಿ, ಕರ್ನಾಟಕದ 69 ವರ್ಷದ ಏಕೀಕೃತ ರಾಜ್ಯದ ಸಾಧನೆಗಳ ಬಗ್ಗೆ ಮಾತನಾಡಿದರು. ಸರ್ಕಾರದ ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಸೇರಿದಂತೆ ಜನಪರ ಯೋಜನೆಗಳ ಯಶಸ್ವಿ ಅನುಷ್ಠಾನವನ್ನು ಉಲ್ಲೇಖಿಸಿದರು.



ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ವಿವರಿಸುತ್ತಾ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಮೂಲಸೌಕರ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪ್ರಗತಿಯನ್ನೂ ಅವರು ಹಂಚಿಕೊಂಡರು. ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ ಎಂದರು. ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ನೆನಪಿಸಿ, ತಂತ್ರಜ್ಞಾನ ಯುಗದಲ್ಲಿಯೂ ಕನ್ನಡ ಹಿಂದುಳಿಯದಂತೆ ರಾಜ್ಯ ಸರ್ಕಾರ ಕೈಗೊಂಡ ಪ್ರಯತ್ನಗಳನ್ನು ಪ್ರಸ್ತಾಪಿಸಿದರು. “ಕನ್ನಡ ನುಡಿ ಉಳಿಸೋಣ, ಬೆಳೆಸೋಣ — ಇದೇ ನಿಜವಾದ ರಾಜ್ಯೋತ್ಸವ ಆಚರಣೆ” ಎಂದು ಅವರು ಕರೆ ನೀಡಿದರು.

ರಾಜ್ಯೋತ್ಸವದ ಹಿರಿಮೆ :
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯ, ಪಟಾಕಿ ಪ್ರದರ್ಶನ ಮತ್ತು ಕನ್ನಡ ಧ್ವಜಾರೋಹಣ ದೊಂದಿಗೆ ಮೈದಾನ ಉತ್ಸಾಹದಿಂದ ಕಂಗೊಳಿಸಿತು. ಸಮಾರಂಭದ ಕೊನೆಯಲ್ಲಿ ಎಲ್ಲ ಗಣ್ಯರು “ಜೈ ಕರ್ನಾಟಕ ಮಾತೆ” ಘೋಷಣೆ ಮೂಲಕ ಕನ್ನಡ ನಾಡಿನ ಏಕತೆಯ ಸ್ಫೂರ್ತಿಯನ್ನು ಹಂಚಿಕೊಂಡರು.
“ಎಂದೆಂದೂ ಕನ್ನಡ ಉಸಿರಾಗಲಿ, ಕನ್ನಡ ಸದಾ ಹಸಿರಾಗಿರಲಿ!”




