ನಾಳೆ ನವಂಬರ್ 5ರಂದು ಬೆಳ್ತಂಗಡಿ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರ ಪದಗ್ರಹಣ ಸಮಾರಂಭ
ದ್ವಿತೀಯ ಬಿಷಪ್ ಆಗಿ ಇತಿಹಾಸ ಸೃಷ್ಟಿಸಲಿರುವ ಅತೀ ವಂದನೀಯ ಮಾರ್ ಜೇಮ್ಸ್ ಪಟ್ಟೇರಿಲ್

ಬೆಳ್ತಂಗಡಿ ಧರ್ಮಕ್ಷೇತ್ರಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿರುವ ಪರಮಪೂಜ್ಯ ಮಾರ್ ಜೇಮ್ಸ್ ಪಟ್ಟೇರಿಲ್ ರವರ ಧರ್ಮಾಧ್ಯಕ್ಷ ದೀಕ್ಷೆ ಹಾಗೂ ಅಧಿಕಾರ ಸ್ವೀಕಾರ ಸಮಾರಂಭ ನವಂಬರ್ 5ರಂದು ಬುಧವಾರ ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕಥೆಡ್ರಲ್ ಚರ್ಚ್ ನಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಧರ್ಮಕ್ಷೇತ್ರದ ಶ್ರೇಷ್ಠ ಗುರು Msgr ಜೋಸೆಫ್ ವಲಿಯಪರಂಬಿಲ್ ರವರು ಬೆಳ್ತಂಗಡಿಯಲ್ಲಿ ನಿನ್ನೆ ನವಂಬರ್ 3ರಂದು ಸೋಮವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.


ಈ ಸಮಾರಂಭದಲ್ಲಿ ಸೀರೋ ಮಲಬಾರ್ ಧರ್ಮಸಭೆಯ ಮಹಾ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ರಾಫೇಲ್ ತಟ್ಟಿಲ್, ತಲಶೇರಿ ಆರ್ಚ್ ಬಿಷಪ್ ರವರಾದ ಅತೀ ವಂದನೀಯ ಡಾ ಜೋಸೆಫ್ ಪಾಮ್ಟ್ಲಾನಿ, ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್ ಬಿಷಪ್ ಅತೀ ವಂದನೀಯ ಡಾ. ಪೀಟರ್ ಮಚಾದೊ, ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (CBCI) ಅಧ್ಯಕ್ಷರಾದ ಮಾರ್ ಆಂಡ್ರೂಸ್ ತಾಯತ್ತು, ಅಪೋಸ್ಟೋಲಿಕ್ ನುನ್ಸಿಯೊರವರ ಉಪ ಮುಖ್ಯಸ್ಥರಾದ ಅತೀ ವಂದನೀಯ Msgr ಆ್ಯಂಡ್ರಿಯಾ ಫ್ರಾನ್ಸಿಯಾ, ವಂದನೀಯ ಫಾದರ್ ಮ್ಯಾಥ್ಯೂ ವಟ್ಟಮಟ್ಟಮ್ CMF, ಕ್ಲಾರೆಟಿಯನ್ಸ್ ನ ಸುಪೀರಿಯರ್ ಜನರಲ್, ರೋಮ್ ಹಾಗೂ ಭಾರತದಾದ್ಯಂತದ ಹಲವಾರು ಆರ್ಚ್ ಬಿಷಪ್ ರವರು, ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಸಹಸ್ರಾರು ಭಕ್ತಾಧಿಗಳು ಭಾಗವಹಿಸಲಿದ್ದಾರೆ.

ಧರ್ಮಾಧ್ಯಕ್ಷ ದೀಕ್ಷೆಯು ಒಂದು ಪವಿತ್ರ ಧಾರ್ಮಿಕ ಆಚರಣೆಯಾಗಿದ್ದು ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ನಡೆಯಲಿದ್ದು ಬಳಿಕ ಹೊಸ ಧರ್ಮಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಅತೀ ವಂದನೀಯ ಮಾರ್ ಜೇಮ್ಸ್ ಪಟ್ಟೇರಿಲ್ ಮತ್ತು ನಿವೃತ್ತಿಗೊಳ್ಳುತ್ತಿರುವ ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಝಿಯವರಿಗೂ ಶುಭಕೋರಲು ಒಂದು ಸಾರ್ವಜನಿಕ ಸಮ್ಮೇಳನವು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ತಮದಲ್ಲಿ ವಿವಿಧ ಮುಖಂಡರುಗಳು ಭಾಗಿಗಳಾಗಲಿದ್ದಾರೆ ಎಂದು ತಿಳಿಸಿದರು.

ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಝಿಯವರು ಕಳೆದ 26 ವರ್ಷಗಳಿಂದ ಬೆಳ್ತಂಗಡಿ ಧರ್ಮಕ್ಷೇತ್ರವನ್ನು ಮುನ್ನಡೆಸುತ್ತಿದ್ದು ಅವರು ಈಗ ನಿವೃತ್ತಿಗೊಳ್ಳುತ್ತಿದ್ದಾರೆ. ಕಳೆದ 26ವರ್ಷಗಳಲ್ಲಿ ದೇವರು ಪರಮಪೂಜ್ಯ ಡಾ. ಲಾರೆನ್ಸ್ ರವರ ಮೂಲಕ ಬೆಳ್ತಂಗಡಿ ಧರ್ಮಕ್ಷೇತ್ರಕ್ಕೆ ಈ ನಾಡಿನ ಜನತೆಗೆ ನೀಡಿದ ಎಲ್ಲಾ ಅನುಗ್ರಹಗಳಿಗೆ ಧರ್ಮಕ್ಷೇತ್ರವು ಚಿರಋಣಿಯಾಗಿದೆ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಝಿಯವರ ಕೊಡುಗೆ ಅಪಾರವಾದದ್ದು. ಅದರಲ್ಲೂ ಪ್ರಧಾನವಾಗಿ ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾಡಿದ ಕೊಡುಗೆ ಅದ್ವಿತೀಯವಾಗಿದೆ ಎಂದು ಅವರು ನೆನೆಸಿದರು.


ನಿವೃತ್ತರಾಗುವ ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಝಿಯವರು ಬೆಳ್ತಂಗಡಿ ಲಾಯಿಲದಲ್ಲಿರುವ ವಿಯಾನ್ನಿ ಸದನದಲ್ಲಿ ನಿವೃತ್ತಿ ಜೀವನವನ್ನು ಕಳೆಯಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾದರ್ ಸುನಿಲ್ ಐಸಾಕ್ ಮಾಹಿತಿಗಳನ್ನು ನೀಡಿದರು. ಮಾದ್ಯಮ ಸಮಿತಿ ಸದಸ್ಯರುಗಳಾದ ಜೈಸನ್ ಪಟ್ಟೇರಿಲ್, ಐವನ್ ಮತ್ತು ಆಲ್ವಿನ್ ಉಪಸ್ಥಿತರಿದ್ದರು.




