ಮೊಗರ್ನಾಡ್ ಚರ್ಚ್ 250ನೇ ವರ್ಷದ ಜುಬಿಲಿ ಆಚರಣೆ ಪ್ರಯುಕ್ತ ಭವ್ಯ ಪಾದಯಾತ್ರೆ
ಪೂರ್ವಜರ ಆತ್ಮಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಅವರ ಆದರ್ಶ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು – ಫಾದರ್ ಹೆರಿ ಡಿಸೋಜ

ಮಂಗಳೂರು ಧರ್ಮಕ್ಷೇತ್ರದ ಮೊಗರ್ನಾಡ್ ದೇವಮಾತಾ ಚರ್ಚ್ ತನ್ನ 250ನೇ ವರ್ಷದ ಜ್ಯುಬಿಲಿ ಆಚರಣೆಯ ಅಂಗವಾಗಿ ಭವ್ಯ ಯಾತ್ರಿಕ ಪಾದಯಾತ್ರೆಯನ್ನು ನವಂಬರ್ 2ರಂದು ಭಾನುವಾರ ಆಯೋಜಿಸಿತು. ಮಧ್ಯಾಹ್ನ 3.00 ಗಂಟೆಗೆ ಮೊಗರ್ನಾಡ್ ಚರ್ಚ್ ನಿಂದ ಆರಂಭಗೊಂಡ ಪಾದಯಾತ್ರೆ ಮೊಡಂಕಾಪು ಬಾಲ ಏಸುವಿನ ಚರ್ಚ್ ತನಕ ಮೆರವಣಿಗೆಯ ರೂಪದಲ್ಲಿ ನಡೆಯಿತು.






















ಈ ಪಾದಯಾತ್ರೆಯಲ್ಲಿ ಗ್ಲೋರಿಯಾ, ಜೆರುಜಲೆಮ್, ರಿಜೋಯ್ಸ್, ಬೆತ್ಲೆಹೆಮ್ ಮತ್ತು ಹೊಸನ್ನಾ ವಲಯಗಳ ಮಕ್ಕಳು, ಯುವಜನರು ಹಾಗೂ ಹಿರಿಯರು ಸೇರಿದಂತೆ ಸುಮಾರು 1000 ಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದರು. ಬೊಳ್ಳಾಯಿ – ಮೆಲ್ಕಾರ್ – ಪಾಣೆಮಂಗಳೂರು – ಬಿ.ಸಿ.ರೋಡ್ ಮಾರ್ಗದ ಮೂಲಕ ಉತ್ಸಾಹಭರಿತವಾಗಿ ಪಾದಯಾತ್ರೆ ಮುಂದುವರಿಯಿತು. ಸಂಜೆ 5.45ಕ್ಕೆ ಮೊಡಂಕಾಪು ಚರ್ಚ್‌ನಲ್ಲಿ ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಲೂವಿಸ್ ಪಾವ್ಲ್ ಡಿಸೋಜರವರು ದಿವ್ಯ ಬಲಿ ಪೂಜೆಯನ್ನು ನೆರವೇರಿಸಿ ಎಲ್ಲಾ ಪಾದಯಾತ್ರಾರ್ಥಿಗಳಿಗೆ ಆಶೀರ್ವದಿಸಿದರು.












ಈ ಸಂದರ್ಭದಲ್ಲಿ ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ಫಾದರ್ ನವೀನ್ ಪ್ರಕಾಶ್ ಪಿಂಟೊ, ಫಾದರ್ ಹೆರಿ ಡಿಸೋಜ, ಫಾದರ್ ಆ್ಯಂಟನಿ ಲೂವಿಸ್, ಫಾದರ್ ವಿಕ್ಟರ್ ಡಿಸೋಜ, ಫಾದರ್ ಲ್ಯಾನ್ಸಿ, ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಫಾದರ್ ಸೈಮನ್ ಡಿಸೋಜ, ಬ್ರದರ್‌ಗಳಾದ ಅವಿಲ್ ಸಾಂತುಮಾಯರ್ ಹಾಗೂ ಪ್ರಿಸ್ಟನ್, ಧರ್ಮಭಗಿನಿಯರು ಮತ್ತು ಅನೇಕ ಭಕ್ತಾಧಿಗಳು ಭಾಗವಹಿಸಿದ್ದರು.


















ಪ್ರವಚನ ನೀಡಿದ ಫಾದರ್ ಹೆರಿ ಡಿಸೋಜರವರು ಪವಿತ್ರ ಪುಸ್ತಕ ಬೈಬಲ್ ನಲ್ಲಿರುವಂತೆ “ಯಾರೆಲ್ಲ ಅಷ್ಟ ಭಾಗಿಗಳ ಹಾಗೆ ಜೀವಿಸುತ್ತಾರೋ ಅವರು ಶಾಶ್ವತವಾಗಿಯೂ ಜೀವಿಸುತ್ತಾರೆ. ಪೂರ್ವಜರ ಆತ್ಮಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಅವರ ಆದರ್ಶ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ತಿಳಿಸಿದರು. ನಿವೃತ್ತ ಬಿಷಪ್ ಡಾ. ಲೂವಿಸ್ ಪಾವ್ಲ್ ಡಿಸೋಜರವರು ಮಾತನಾಡಿ, “ಪೂರ್ವಜರ ವಾಸಸ್ಥಳಕ್ಕೆ ಪಾದಯಾತ್ರೆಯ ಮೂಲಕ ಭೇಟಿ ನೀಡುವ ನಿಮ್ಮ ಉದ್ದೇಶ ಮೆಚ್ಚುವಂತಹದ್ದು. ದೇವರ ಕೃಪೆ ಸದಾ ನಿಮ್ಮ ಮೇಲಿರಲಿ,” ಎಂದು ಹೇಳಿ ಆಶೀರ್ವದಿಸಿದರು.





ಬಲಿ ಪೂಜೆಯ ನಂತರ ಪೂರ್ವಜರ ಸಮಾಧಿಯ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮೊಗರ್ನಾಡ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ಮೊಡಂಕಾಪು ಚರ್ಚ್ ಉಪಾಧ್ಯಕ್ಷ ಸುನಿಲ್ ವೇಗಸ್, ಕಾರ್ಯದರ್ಶಿ ಮನೋಹರ್ ಡಿಕೋಸ್ತಾ, ಸಂಯೋಜಕಿ ವೀಣಾ ಗೋವಿಯಸ್, ಸಿಸ್ಟರ್ ಆ್ಯನ್ನಿ, ಹಾಗೂ ಜ್ಯುಬಿಲಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.




ಇದೇ ವೇಳೆ ನಿವೃತ್ತ ಬಿಷಪ್ ಲೂವಿಸ್ ಪಾವ್ಲ್ ಡಿಸೋಜ ಮತ್ತು ಫಾದರ್ ವಿಕ್ಟರ್ ಡಿಸೋಜರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸೌಹಾರ್ದತೆಯ ಸಂಕೇತವಾಗಿ ಬೊಳ್ಳಾಯಿ ಮುಸ್ಲಿಂ ಬಾಂಧವರು ಪಾದಯಾತ್ರಿಕರಿಗೆ ದಾರಿಮಧ್ಯದಲ್ಲಿ ತಂಪಾದ ಪಾನೀಯ ನೀಡಿದದ್ದು ವಿಶೇಷವಾಗಿತ್ತು. ಪಾದಯಾತ್ರೆ ಯಶಸ್ವಿಗೊಳಿಸಿದ ಎಲ್ಲರಿಗೂ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಧನ್ಯವಾದ ಅರ್ಪಿಸಿದರು. ಮೊಡಂಕಾಪು ಚರ್ಚ್ ವತಿಯಿಂದ ಎಲ್ಲರಿಗೂ ಫಲಾಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.





