ಮಹಿಳಾ ವೈಭವ – 2026: ಮಂಗಳೂರಿನಲ್ಲಿ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ
ಮಹಿಳಾ ಸಬಲೀಕರಣಕ್ಕೆ ಸುವರ್ಣ ಅಧ್ಯಾಯ – ಚಂಚಲ ತೇಜೋಮಯ

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು 2026ರ ಜನವರಿ 31 ಮತ್ತು ಫೆಬ್ರವರಿ 1ರಂದು ಮಂಗಳೂರಿನ ಪುರಭವನದಲ್ಲಿ ‘ಕರ್ನಾಟಕ ರಾಜ್ಯ ಮಹಿಳಾ ಸಾಂಸ್ಕೃತಿಕ ಸಮ್ಮೇಳನ – ಮಹಿಳಾ ವೈಭವ 2026’ ಎಂಬ ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ಆಯೋಜಿಸಿದೆ. ಮಹಿಳಾ ಸಬಲೀಕರಣಕ್ಕಾಗಿ 40 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಒಕ್ಕೂಟವು ತಾಲೂಕಿನ 125 ಮಹಿಳಾ ಮಂಡಳಿಗಳನ್ನು ಒಳಗೊಂಡಿದೆ. ಪಕ್ಷ, ಧರ್ಮ, ಜಾತಿ ಮತ್ತು ಭೇದವಿಲ್ಲದೆ ಎಲ್ಲಾ ವರ್ಗದ ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಸಮ್ಮೇಳನದ ಅಂಗವಾಗಿ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸುವ ಉದ್ದೇಶದಿಂದ ಜಾನಪದ ಸಾಂಸ್ಕೃತಿಕ ಸ್ಪರ್ಧೆಗಳು, ಮಹಿಳೆಯರ ಸೃಜನಶೀಲತೆ ಪ್ರದರ್ಶನಗಳು ಹಾಗೂ ಚರ್ಚಾ ಗೋಷ್ಠಿಗಳು ನಡೆಯಲಿವೆ. ವಿಜೇತ ತಂಡಗಳಿಗೆ ರೂಪಾಯಿ 1,00,000 ಮತ್ತು 75,000 ಹಾಗೂ 50,000 ನಗದು ಬಹುಮಾನಗಳನ್ನು ನೀಡಲಾಗುವುದು.


ಮಹಿಳಾ ಸಶಕ್ತಿಕರಣದ ಕ್ಷೇತ್ರದಲ್ಲಿ ಅಮೋಘ ಕೊಡುಗೆ ನೀಡಿದ ಐವರು ಸಾಧಕಿಯರಿಗೆ ‘ಕರ್ನಾಟಕ ರಾಜ್ಯ ಮಹಿಳಾ ರತ್ನ’ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯು ರೂಪಾಯಿ 1,00,000 ನಗದು, ಫಲಕ ಮತ್ತು ಗೌರವ ಪತ್ರವನ್ನು ಒಳಗೊಂಡಿರುತ್ತದೆ. ಸಮ್ಮೇಳನದ ಸವಿನೆನಪಿಗಾಗಿ ರಾಜ್ಯದ ಸಂಸ್ಕೃತಿ, ಇತಿಹಾಸ ಮತ್ತು ಮಹಿಳಾ ವಿಷಯಾಧಾರಿತ ಲೇಖನಗಳೊಂದಿಗೆ ಸ್ಮರಣ ಸಂಚಿಕೆ ಪ್ರಕಟಿಸಲಾಗುತ್ತಿದೆ. ಯುವ ಮಹಿಳಾ ಲೇಖಕಿಯರಿಗೆ ಲೇಖನ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಸಮ್ಮೇಳನದ ವೇಳೆ ಮಹಿಳಾ ಉತ್ಪನ್ನ ಪ್ರದರ್ಶನ, ಆರೋಗ್ಯ ತಪಾಸಣಾ ಶಿಬಿರ, ಕರಾವಳಿಯ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಮಹಿಳೆಯರ ಉನ್ನತಿಗಾಗಿ ಸರಕಾರದ ಯೋಜನೆಗಳಿಗೆ ಪೂರಕವಾಗಿ ಈ ಸಮ್ಮೇಳನವು ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯರವರು ಇಂದು ನವಂಬರ್ 11ರಂದು ಮಂಗಳವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚಂಚಲ ತೇಜೋಮಯ ಅಧ್ಯಕ್ಷರು, ಮನೋರಮಾ ಉಮೇಶನ್ – ಉಪಾಧ್ಯಕ್ಷರು, ರೇಖಾ ಶೆಟ್ಟಿ – ಕಾರ್ಯದರ್ಶಿ, ವಿಜಯಲಕ್ಷ್ಮಿ ಬಿ. ಶೆಟ್ಟಿ – ಗೌರವಾಧ್ಯಕ್ಷರು, ದೇವಕಿ ಅಚ್ಯುತ – ಗೌರವ ಸಲಹೆಗಾರರು, ಪ್ರೇಮಾ ಮಾಧವ್ – ಸಾಂಸ್ಕೃತಿಕ ಕಾರ್ಯದರ್ಶಿ, ಲತಾ – ಕ್ರೀಡಾ ಕಾರ್ಯದರ್ಶಿ, ಭಾರತಿ ಎಂ. – ಖಜಾಂಚಿ ಮತ್ತು ಶ್ವೇತ – CDPO ಮಂಗಳೂರು ಉಪಸ್ಥಿತರಿದ್ದರು.




