ಅಕ್ರಮ ಗೋಹತ್ಯೆ ಪ್ರಕರಣ — ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಾರ್ಯಾಚರಣೆ
ಪರವಾನಗಿ ಇಲ್ಲದೆ ಮನೆಯ ಆವರಣದಲ್ಲೇ ಕಸಾಯಿಖಾನೆ ನಿರ್ಮಿಸಿ ಮನೆಯಿಂದಲೇ ವಿದ್ಯುತ್ ಸಂಪರ್ಕ ಪಡೆದು ಅಕ್ರಮ ವಧೆ

ಬಂಟ್ವಾಳ ತಾಲೂಕು ಅರಳ ಗ್ರಾಮದ ನಿವಾಸಿ 57 ವರ್ಷ ಪ್ರಾಯದ ಮೈಯದಿ ಎಂಬವರು ತಮ್ಮ ಮನೆಯ ಆವರಣದಲ್ಲಿರುವ ಶೆಡ್‌ನಲ್ಲಿ ಅಕ್ರಮವಾಗಿ ಜಾನುವಾರುಗಳ ವಧೆ ನಡೆಸುತ್ತಿದ್ದರೆಂಬ ಮಾಹಿತಿ ಹಿನ್ನೆಲೆಯಲ್ಲಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದರು. ದಾಳಿಯ ಸಮಯದಲ್ಲಿ ಶೆಡ್‌ನಲ್ಲಿ ಮೂವರು ವ್ಯಕ್ತಿಗಳು ದನವನ್ನು ವಧೆ ಮಾಡಿ ಮಾಂಸ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಅವರಲ್ಲಿ ಇಬ್ಬರು ಸ್ಥಳದಿಂದ ಪರಾರಿಯಾದರು. ಒಬ್ಬನನ್ನು ಸ್ಥಳದಲ್ಲೇ ಬಂಧಿಸಲಾಗಿ, ಆತನೇ ಮೈಯದಿ ಎಂದು ಗುರುತಿಸಲಾಗಿದೆ.


ಪೊಲೀಸರು ಶೆಡ್‌ನಲ್ಲಿ ಇರಿಸಿದ್ದ ಮೂರು ಹಸುಗಳು ಮತ್ತು ಒಂದು ಕರುವನ್ನು ರಕ್ಷಿಸಿದ್ದು, ಸುಮಾರು 150 ಕಿಲೋ ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರಮ 172/2022 ಪ್ರಕರಣ ದಾಖಲಿಸಲಾಗಿದ್ದು ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020 ರ ಕಲಂ 4, 5, 7 ಮತ್ತು 12 ಪ್ರಾಣಿ ಹಿಂಸೆ ನಿಷೇಧ ಕಾಯಿದೆ ಕಲಂ 11(1)(ಡಿ), ಬಿಎನ್‌ಎಸ್ ಕಾಯಿದೆ ಕಲಂ 303(2) ಹಾಗೂ 307 ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಆರೋಪಿ ಮೈಯದಿಯವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಪರಾರಿಯಾದ ಇಬ್ಬರ ಪತ್ತೆ ಕಾರ್ಯ ಮುಂದುವರಿದಿದೆ.

ಪೊಲೀಸರು ತಿಳಿಸಿದಂತೆ ಆರೋಪಿಗಳು ಯಾವುದೇ ಕಾನೂನುಬದ್ಧ ಪರವಾನಗಿ ಇಲ್ಲದೆ ಮನೆಯ ಆವರಣದಲ್ಲೇ ಕಸಾಯಿಖಾನೆ ನಿರ್ಮಿಸಿ, ಮನೆಯಿಂದಲೇ ವಿದ್ಯುತ್ ಸಂಪರ್ಕ ಪಡೆದು ಅಕ್ರಮ ವಧೆ ಮಾಡುತ್ತಿದ್ದರೆಂದು ಕಂಡುಬಂದಿದೆ. ಇದರ ಹಿನ್ನೆಲೆಯಲ್ಲಿ ಮನೆಯ ಜೊತೆಗೆ ಶೆಡ್‌ನ ಆವರಣವನ್ನೂ ಜಪ್ತಿ ಮಾಡಲಾಗಿದ್ದು, ಮಾನ್ಯ ಸಹಾಯಕ ಆಯುಕ್ತರು ಮತ್ತು ಉಪವಿಭಾಗೀಯ ದಂಡಾಧಿಕಾರಿಗಳಿಗೆ ಮುಟ್ಟುಗೋಲು ಮಾಡಲು ವರದಿ ಸಲ್ಲಿಸಲಾಗಿದೆ.




