August 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮುಲ್ಕಿಯ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೊಯೆಟಿಕಾ ಕವಿಗೋಷ್ಠಿ–45

ಶಾಲೆಯ ಎಲ್ಲಾ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಆಟಿಕೆಗಳ ವಿತರಣೆ

ನವೆಂಬರ್ 25ರಂದು ಮಂಗಳವಾರ ಮುಲ್ಕಿಯ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಪೊಯೆಟಿಕಾ ಕವಿಗೋಷ್ಠಿ – 45’ ಹಾಗೂ ಶಾಲೆಯ ಎಲ್ಲಾ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಆಟಿಕೆಗಳ ವಿತರಣಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು. ಬ್ಯಾಂಡ್ ವಾದ್ಯದ ನುಡಿಗಟ್ಟಿನಲ್ಲಿ ಅತಿಥಿಗಳನ್ನು ಬರಮಾಡಿಕೊಳ್ಳಲಾಗಿದ್ದು, ನಂತರ ಶಾಲಾ ಮಕ್ಕಳಿಂದ ಪ್ರಾರ್ಥನಾ ಗೀತೆ ಮತ್ತು ಸ್ವಾಗತ ನೃತ್ಯಗಳ ಮೂಲಕ ಆತ್ಮೀಯ ಸ್ವಾಗತ ಸಲ್ಲಿಸಲಾಯಿತು.

ಕಾರ್ಯಕ್ರಮಕ್ಕೆ ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯ ಸಲಹೆದಾರರಾದ ವಂದನೀಯ ಭಗಿನಿ ಶಾಲೆಟ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರ್ವಧರ್ಮ ಸಂಗಮದ ಮ್ಯಾನೇಜಿಂಗ್ ಟ್ರಸ್ಟಿ ಹೇಮಾಚಾರ್ಯ, ಕಾರ್ಯಕ್ರಮದ ಸಂಘಟಕ ನವೀನ್ ಪಿರೇರಾ (ಸುರತ್ಕಲ್), ಕವಿಗೋಷ್ಠಿಯ ಅಧ್ಯಕ್ಷ ಮನ್ಸೂರ್ ಮುಲ್ಕಿ, ಮೆಡಲಿನ್ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಭಗಿನಿ ಜೆಸಿಂತಾ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಸುಮಾ ಹಾಗೂ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ಭಗಿನಿ ಪ್ರೆಸಿಲ್ಲಾ ಫ್ಲೋರಿ ಡಿಸೋಜ ಉಪಸ್ಥಿತರಿದ್ದರು.

ಅತಿಥಿಗಳನ್ನು ಭಗಿನಿ ಪ್ರೆಸಿಲ್ಲಾ ಫ್ಲೋರಿ ಡಿಸೋಜ ಆತ್ಮೀಯವಾಗಿ ಸ್ವಾಗತಿಸಿದರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ರುವಾರಿ ಹಾಗೂ ಪೊಯೆಟಿಕಾ ಸಂಸ್ಥೆಯ ಮುಖ್ಯಸ್ಥ ನವೀನ್ ಪಿರೇರಾ ಸುರತ್ಕಲ್ ರವರಿಗೆ ಶಾಲಾ ವತಿಯಿಂದ ಸನ್ಮಾನ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾದ ದಾಯ್ಜಿವರ್ಲ್ಡ್ ನಿರ್ದೇಶಕ ಹೇಮಾಚಾರ್ಯ ಹಾಗೂ ಅಧ್ಯಕ್ಷೆ ಭಗಿನಿ ಶಾಲೆಟ್ ಡಿಸೋಜ, ಪೊಯೆಟಿಕಾ ಸಂಸ್ಥೆಯ ಸಾಹಿತ್ಯ ಸೇವೆ ಹಾಗೂ ಜನಪರ ಕಾಳಜಿಯನ್ನು ಪ್ರಶಂಸಿಸಿದರು.

ಮೆಡಲಿನ್ ಹಳೆಯವಿದ್ಯಾರ್ಥಿ ಮತ್ತು ಪೊಲೀಸ್ ಅಧಿಕಾರಿಯಾದ ಮನ್ಸೂರ್ ಮುಲ್ಕಿಯ ನೇತೃತ್ವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಜೊಸ್ಸಿ ಪಿಂಟೊ, ಹೇಮಾಚಾರ್ಯ, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಮರಿಯ ಜಾರ್ಜ್ ಕುಲ್ಶೇಖರ್ ಹಾಗೂ ನವೀನ್ ಪಿರೇರಾ ಸುರತ್ಕಲ್ ತಮ್ಮ ತಮ್ಮ ಕವಿತಾ ವಾಚನಗಳನ್ನು ನೆರವೇರಿಸಿದರು.

ಕವಿಗೋಷ್ಠಿಯ ಬಳಿಕ ಎಡ್ವರ್ಡ್ ಲೋಬೊ ಅವರ ಮಿಮಿಕ್ರಿ ಪ್ರದರ್ಶನ ಮಕ್ಕಳನ್ನು ಮನೋರಂಜಿಸಿ ಮಂತ್ರಮುಗ್ಧರನ್ನಾಗಿ ಮಾಡಿತು. ನಂತರ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಆಟಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಸಹಶಿಕ್ಷಕಿ ಕೊನಿ ಪಿ. ವಾಜ್ ನಿರೂಪಿಸಿದ್ದು, ಸಹಶಿಕ್ಷಕಿ ಲವೀನಾ ಜಾಯ್ಸ್ ರೊಡ್ರಿಗಸ್ ಧನ್ಯವಾದಗಳನ್ನು ಸಲ್ಲಿಸಿದರು.

ಆಟಿಕೆಗಳನ್ನು ಪಡೆದ ಮಕ್ಕಳ ಮುಖದಲ್ಲಿ ಅರಳಿದ ಸಂತಸದ ನಗುವು ಮತ್ತು ಶಾಲೆಯ ವಾತಾವರಣದಲ್ಲಿ ಮೂಡಿದ ಆನಂದದ ಹೊನಲೊಂದು, ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಮನಸೆಳೆಯುವಂತಿತ್ತು.

You may also like

News

ನೇಪಾಳದ ದುಃಖದಲ್ಲಿ ಮಂಗಳೂರು ಧರ್ಮಕ್ಷೇತ್ರವೂ ಭಾಗಿ – ವಿಶೇಷ ಪ್ರಾರ್ಥನೆಗೆ ಬಿಷಪ್ ಸಲ್ಡಾನ್ಹಾ ಕರೆ

ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಫಾದರ್ ರೂಪೇಶ್ ಮಾಡ್ತಾ ಹಾಗೂ ರೋಯ್ ಕ್ಯಾಸ್ತೆಲಿನೊ ಜಂಟಿ ಪತ್ರಿಕಾ ಪ್ರಕಟನೆ ಮಂಗಳೂರು: ನೇಪಾಳದ ವಿವಿಧ ಭಾಗಗಳಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ
News

ಕಾನ್ಪುರ ವಿಮಾನ ದುರಂತ – ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಜಿಲ್ಲೆಯ ಮೂಲದ ಯುವ ತರಬೇತಿ ಪೈಲಟ್ 22 ವರ್ಷ ಪ್ರಾಯದ ಅಭಿಷೇಕ್ ಪೂಜಾರಿ ಮೃತಪಟ್ಟಿರುವುದು ದೃಢಪಟ್ಟಿದೆ.

You cannot copy content of this page